ಕೊಂಚಾಡಿ: ದೈವಸ್ಥಾನದಿಂದ ಕಳ್ಳತನಕ್ಕೆ ಯತ್ನ; ಆರೋಪ

ಮಂಗಳೂರು, ಸೆ.14: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲ್ ಕೊಂಚಾಡಿಯಲ್ಲಿರುವ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬ ಕಳ್ಳತನಕ್ಕೆ ಯತ್ನಿಸಿದ ಆರೋಪ ಕೇಳಿ ಬಂದಿದೆ.
ಕ್ಷೇತ್ರಕ್ಕೆ ನುಗ್ಗಿದ ವ್ಯಕ್ತಿಯು ದೈವ -ದೇವರ ಬೆಳ್ಳಿಯ ಸೊತ್ತುಗಳನ್ನು ಕದಿಯಲು ಯತ್ನಿಸಿದ ಘಟನೆ ಎರಡು ದಿನಗಳ ಹಿಂದೆ ನಡೆದಿದೆ ಎನ್ನಲಾಗಿದೆ. ವ್ಯಕ್ತಿಯು ಶ್ರೀ ಕ್ಷೇತ್ರದ ಕೆಲವು ಸೊತ್ತುಗಳನ್ನು ಕಳವಿಗೆ ಯತ್ನಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಆ ವ್ಯಕ್ತಿಯನ್ನು ಹಿಡಿದು ಕಟ್ಟಿ ಹಾಕಿದ್ದರು ಎಂದು ಹೇಳಲಾಗುತ್ತದೆ.
ಈ ಬಗ್ಗೆ ಕಾವೂರು ಠಾಣೆಯ ಪೊಲೀಸರಿಗೆ ವಿಷಯ ತಿಳಿಸಿ ಗಂಟೆ ಕಳೆದರೂ ಪೊಲೀಸರು ಸ್ಥಳಕ್ಕಾಗಮಿಸದೇ ಇದ್ದುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವುದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳವಿಗೆ ಯತ್ನಿಸಿದ ವ್ಯಕ್ತಿಯನ್ನು ಹಿಡಿದರೂ ಸ್ಥಳಕ್ಕೆ ಆಗಮಿಸಲು ನಮ್ಮಲ್ಲಿ ವಾಹನ ಇಲ್ಲ ಎಂಬ ಸಬೂಬು ಹೇಳಿದ್ದಾರೆ ಎಂದು ವೀಡಿಯೊ ಮೂಲಕ ದೂರಲಾಗಿದೆ.
ನಾವು ಸ್ಥಳಕ್ಕೆ ತೆರಳಿ ಆರೋಪಿಯನ್ನು ಠಾಣೆಗೆ ಕರೆ ತಂದು ವಿಚಾರಿಸಿದ್ದೇವೆ. ಆತ ಮಾನಸಿಕ ಅಸ್ವಸ್ಥನೆಂದು ತಿಳಿದು ಬಂದಿದೆ. ಹಾಗಾಗಿ ಯಾವುದೇ ಪ್ರಕರಣ ದಾಖಲಿಸದೆ ಆತನನ್ನು ಬಿಟ್ಟು ಬಿಡಲಾಗಿದೆ ಎಂದು ಠಾಣೆಯ ಪೊಲೀಸರು ತಿಳಿಸಿದ್ದಾರೆ.