ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ನೂತನ ಪಿಟ್ ಲೈನ್ ಉದ್ಘಾಟನೆ

ಮಂಗಳೂರು, ಸೆ.14: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಕೋಚಿಂಗ್ ಡಿಪೊದಲ್ಲಿ ನೂತನ ಪಿಟ್ ಲೈನ್ನ್ನು ದಕ್ಷಿಣ ರೈಲ್ವೆ ಮಹಾಪ್ರಬಂಧಕ ಬಿ.ಜಿ.ಮಲ್ಯ ಬುಧವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು 6.76 ಕೋ.ರೂ. ವೆಚ್ಚದಲ್ಲಿ ಹೊಸ ಪಿಟ್ ಲೈನನ್ನು ನಿರ್ಮಿಸಲಾಗಿದೆ, 24 ಬೋಗಿಗಳ ನಿರ್ವಹಣಾ ಸಾಮರ್ಥ್ಯವನ್ನು ಇದು ಹೊಂದಿದೆ. ಹಳೆಯ 18 ಕೋಚ್ ಸಾಮರ್ಥ್ಯದ ಪಿಟ್ಲೈನನ್ನು ತೆರವುಗೊಳಿಸಿ ಹೊಸ ನಂ.4 ಮತ್ತು 5ನೇ ಪ್ಲಾಟ್ಫಾರ್ಮ್ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು ಎಂದರು.
ಕೋಚ್ ಕ್ಲೆನಿಂಗ್, ಕೋಚ್ ಚಾರ್ಜಿಂಗ್, ನೀರು ಭರ್ತಿಗೊಳಿಸುವುದು ಇತ್ಯಾದಿ ಕೆಲಸಗಳ ಸಹಿತ ದಿನನಿತ್ಯದ ನಿರ್ವಹಣೆ, ಪರಿಶೀಲನೆಗೆ ಈ ಹೊಸ ಪಿಟ್ಲೈನ್ ನೆರವಾಗಲಿದೆ. ಪ್ರತಿ ಪ್ರಯಾಣದ ಬಳಿಕ ಬೋಗಿಗಳ ತಳದಲ್ಲಿನ ತಪಾಸಣೆ, ಬ್ರೇಕ್ ವ್ಯವಸ್ಥೆಗಳ ಪರಿಶೀಲನೆ, ಇಲೆಕ್ಟ್ರಿಕಲ್ ನಿರ್ವಹಣೆ, ಸ್ವಚ್ಛತೆ, ಹೊರ ಮತ್ತು ಒಳಭಾಗದ ತೊಳೆಯುವಿಕೆ, ಕೋಚ್ಗಳಿಗೆ ನೀರು ತುಂಬಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಅವರು ನೂತನ ಪ್ಲಾಟ್ಫಾರ್ಮ್ ನಂ.4 ಹಾಗೂ 5 ಕಾಮಗಾರಿ, ಕ್ಯಾರೇಜ್ ಮತ್ತು ವ್ಯಾಗನ್ ಡಿಪೊ ಕೆಲಸಗಳನ್ನು ಪರಿಶೀಲಿಸಿದರು.
ಈ ಸಂದರ್ಭ ಪ್ರಧಾನ ಮುಖ್ಯ ಇಂಜಿನಿಯರ್ ದೇಶ್ ರತನ್ ಗುಪ್ತ, ಪ್ರಧಾನ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ಗೌತಮ್ ದತ್ತ, ಪಾಲಕ್ಕಾಡ್ ವಿಭಾಗೀಯ ರೈಲ್ವೆ ಪ್ರಬಂಧಕ ತ್ರಿಲೋಕ್ ಕೊಠಾರಿ ಉಪಸ್ಥಿತರಿದ್ದರು.