ಬೆಂಗಳೂರು: ಫೋನ್ ಕರೆ ಕದ್ದಾಲಿಕೆ ಜಾಲ ಬೆಳಕಿಗೆ

ಬೆಂಗಳೂರು, ಸೆ.14: ಅನಧಿಕೃತವಾಗಿ ಟೆಲಿಫೋನ್ ಎಕ್ಸ್‍ಚೇಂಜ್ ಇಟ್ಟುಕೊಂಡು ಅಂತರ್‍ರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ವಂಚಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇಂದ್ರ ಸರಕಾರದ ಟೆಲಿಕಮ್ಯುನಿಕೇಷನ್ ಇಲಾಖೆಯ ಮಾಹಿತಿಯಾಧರಿಸಿ ನಗರದ ಕೋರಮಂಗಲ, ಮೈಕೋ ಲೇಔಟ್ ಹಾಗೂ ರಾಜಾಜಿನಗರದಲ್ಲಿ ಕಾರ್ಯಾಚರಣೆ ಕೈಗೊಂಡು ಜಾಲವನ್ನು ಭೇದಿಸಿ ಐವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ ತಿಳಿಸಿದರು.
ಬಂಧಿತ ಆರೋಪಿಗಳು ಕೇರಳ ಮೂಲದವರಾಗಿದ್ದು, ಹಲವು ದಿನಗಳಿಂದ ಅಂತರ್‍ರಾಷ್ಟ್ರೀಯ ಫೋನ್ ಕರೆಗಳನ್ನು ಸ್ಥಳೀಯ ಫೋನ್ ಕರೆಗಳಾಗಿ ಪರಿವರ್ತಿಸುವ ವಂಚಕ ಜಾಲದಲ್ಲಿ ಸಕ್ರಿಯರಾಗಿದ್ದರು ಎಂದು ಹೇಳಿದರು.
ಜಿಯೊ ಕಂಪೆನಿಯ ಕಾಲ್‍ಡಿವೈಸರ್‍ಗಳನ್ನು ಪಡೆದು ವಿವಿಧ ಟೆಕ್ನಾಲಜಿ ಕಂಪೆನಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಂತರ್‍ರಾಷ್ಟ್ರೀಯ ಫೋನ್ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಬಂಧಿತರಿಂದ ಡಿವೈಸರ್‍ಗಳು, ಸಿಮ್‍ಗಳು, ಕಂಪ್ಯೂಟರ್‍ಗಳೂ ಸೇರಿ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತ, ಡಿಸಿಪಿ ಡಾ.ಶರಣಪ್ಪ ಸೇರಿ ಪ್ರಮುಖರಿದ್ದರು.







