ಕೋವಿಡ್ ಸೋಂಕಿತ ವಯಸ್ಕರಲ್ಲಿ ಅಲ್‌ಝೈಮರ್ ರೋಗದ ಅಪಾಯ ಹೆಚ್ಚು: ವರದಿ

ನ್ಯೂಯಾರ್ಕ್, ಸೆ.14: ಕೋವಿಡ್ ಸೋಂಕಿಗೆ ಒಳಗಾದ ಹಿರಿಯ ವಯಸ್ಕರಲ್ಲಿ ಒಂದು ವರ್ಷದೊಳಗೆ ಅಲ್‌ಝೈಮರ್ ಕಾಯಿಲೆ ಕಾಣಿಸಿಕೊಳ್ಳುವ ಅಪಾಯ ಗಣನೀಯವಾಗಿ ಹೆಚ್ಚಿದೆ ಎಂದು ಹೊಸ ಅಧ್ಯಯನ ವರದಿ ಹೇಳಿದೆ.
ಅಲ್‌ಝೈಮರ್ ಕಾಯಿಲೆ ಮನುಷ್ಯನಲ್ಲಿ (ಹೆಚ್ಚಾಗಿ ಹಿರಿಯ ವಯಸ್ಕರಲ್ಲಿ) ನೆನಪಿನ ಶಕ್ತಿಯನ್ನು ಕುಂದಿಸಿ ಬಿಡುತ್ತದೆ. ಇವರಿಗೆ ತಾನು ಏನು ತಿಂದಿದ್ದೇನೆ ಅಥವಾ ಮಾತನಾಡಿದ್ದೇನೆ ಎಂಬುದೂ ಮರೆತು ಹೋಗುತ್ತದೆ.
ಅಮೆರಿಕದಲ್ಲಿ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 6.2 ಮಿಲಿಯನ್ ಜನರ ಮೇಲೆ ನಡೆಸಿದ ಈ ಅಧ್ಯಯನದಲ್ಲಿ, ಕೋವಿಡ್ ಸೋಂಕಿಗೆ ಒಳಗಾದ ಹಿರಿಯರಲ್ಲಿ 50%ದಿಂದ 80%ದಷ್ಟು ಜನರಲ್ಲಿ ಅಲ್‌ಝೈಮರ್ ಅಪಾಯ ಹೆಚ್ಚು ಎಂದು ಕಂಡುಬಂದಿದೆ.ಕನಿಷ್ಟ 85 ವರ್ಷದ ಮಹಿಳೆಯರಲ್ಲಿ ಹೆಚ್ಚಿನ ಅಪಾಯವನ್ನು ಗಮನಿಸಲಾಗಿದೆ. ಆದರೆ, ಕೋವಿಡ್ ಸೋಂಕು ಅಲ್‌ಝೈಮರ್ ಕಾಯಿಲೆಯ ಹೊಸ ಬೆಳವಣಿಗೆಯನ್ನು ಪ್ರಚೋದಿಸುತ್ತದೆಯೇ ಅಥವಾ ಅದರ ಹೊರಹೊಮ್ಮುವಿಕೆಯನ್ನು ವೇಗಗೊಳಿಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ ಎಂದು ‘ ಸೈನ್ಸ್ ಡೈಲಿ’ ಹೇಳಿದೆ.
‘ಅಲ್‌ಝೈಮರ್ ಕಾಯಿಲೆಯ ಬೆಳವಣಿಗೆಗೆ ಕಾರಣವಾಗುವ ಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗಿಲ್ಲ. ಆದರೆ 2 ವಿಷಯಗಳನ್ನು ಪ್ರಮುಖ ಎಂದು ಪರಿಗಣಿಸಲಾಗಿದೆ, ವೈರಲ್ ಸೋಂಕುಗಳು ಮತ್ತು ಉರಿಯೂತ. ಕೋವಿಡ್ ಸೋಂಕು ಉರಿಯೂತ ಸೇರಿದಂತೆ ಕೇಂದ್ರ ನರಮಂಡಲದ ಅಸಹಜತೆಯೊಂದಿಗೆ ಸಂಬಂಧ ಹೊಂದಿರುವುದರಿಂದ , ಅಲ್ಪಾವಧಿಯಲ್ಲಿಯೂ ಸಹ ಕೋವಿಡ್ ಸೋಂಕು ಅಲ್‌ಝೈಮರ್‌ನ ಸಾಧ್ಯತೆಯನ್ನು ಹೆಚ್ಚಿಸಬಹುದೇ ಎಂದು ಪರೀಕ್ಷಿಸಲು ನಾವು ಬಯಸಿದ್ದೇವೆ ’ ಎಂದು ಕೇಸ್‌ವೆಸ್ಟರ್ನ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧನಾ ಪ್ರೊಫೆಸರ್, ಅಧ್ಯಯನ ವರದಿಯ ಸಹಲೇಖಕಿ ಪಮೇಲಾ ಡೇವಿಸ್ ಹೇಳಿದ್ದಾರೆ.
2020ರ ಫೆಬ್ರವರಿ ಮತ್ತು 2021ರ ಮೇ ತಿಂಗಳ ನಡುವೆ ವೈದ್ಯಕೀಯ ಚಿಕಿತ್ಸೆ ಪಡೆದ ಅಮೆರಿಕದ 6.2 ಮಿಲಿಯನ್ ಅನಾಮಧೇಯ(ಅನಾಮಿಕ) ಹಿರಿಯ ವಯಸ್ಕರ ಆರೋಗ್ಯ ದಾಖಲೆಗಳನ್ನು ಸಂಶೋಧನಾ ತಂಡ ಪರಿಶೀಲನೆ ನಡೆಸಿದೆ. ಅಲ್‌ಝೈಮರ್‌ನ ಯಾವುದೇ ಪೂರ್ವ ರೋಗ ನಿರ್ಣಯವನ್ನು ಹೊಂದಿರದ ವ್ಯಕ್ತಿಗಳನ್ನು ಸಂಶೋಧಕರು ಆಯ್ಕೆ ಮಾಡಿದ್ದರು. ಹಿರಿಯ ವಯಸ್ಕರನ್ನು - ಅಧ್ಯಯನದ ಅವಧಿಯಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದವರು ಮತ್ತು ಯಾವುದೇ ದಾಖಲಿತ ಪ್ರಕರಣವಿಲ್ಲದವರು ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 4 ಲಕ್ಷ ಮಂದಿ ಪ್ರಥಮ ಗುಂಪಿನಲ್ಲಿದ್ದರೆ, 5.8 ಮಿಲಿಯನ್ ಮಂದಿ ಎರಡನೇ ಗುಂಪಿಗೆ ಸೇರಿದವರು ಎಂದು ‘ನ್ಯೂರೋಸೈನ್ಸ್ ನ್ಯೂಸ್’ ವರದಿ ಮಾಡಿದೆ.
ಅಲ್‌ಝೈಮರ್ ಕಾಯಿಲೆ ಹಾಗೂ ಇತರ ನರಸಂಬಂಧೀ ಅಸ್ವಸ್ಥತೆಗಳ ಮೇಲೆ ಕೋವಿಡ್ ಸೋಂಕಿನ ಪರಿಣಾಮಗಳನ್ನು ಅಧ್ಯಯನ ಮಾಡುವುದಾಗಿ ಮತ್ತು ಕೋವಿಡ್ ಸೋಂಕಿನ ದೀರ್ಘಕಾಲೀನ ಪರಿಣಾಮಗಳಿಗೆ ಚಿಕಿತ್ಸೆ ನೀಡಲು ಅನುಮೋದಿತ ಔಷಧಿಗಳ ಮರುಬಳಕೆಯಲ್ಲಿ ಈ ಅಧ್ಯಯನ ನೆರವಾಗಲಿದೆ ಎಂದು ಅಧ್ಯಯನ ತಂಡ ಹೇಳಿದೆ.