ಜಮ್ಮು ಕಾಶ್ಮೀರದ ಪೂಂಚ್‍ನಲ್ಲಿ ಅಪಘಾತ: 12 ಮಂದಿ ಮೃತ್ಯು; 18 ಮಂದಿಗೆ ಗಾಯ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೌಜಿಯಾಲ್ ನಾಲಾ ಎಂಬಲ್ಲಿ ಮಿನಿ ಬಸ್ ಪ್ರಪಾತಕ್ಕೆ ಬಿದ್ದು ಸಂಭವಿಸಿದ ದುರಂತದಲ್ಲಿ 12 ಮಂದಿ ಮೃತಪಟ್ಟು ಇತರ 18 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟರಲ್ಲಿ 5 ಹಾಗೂ 14 ವರ್ಷದ ಇಬ್ಬರು ಬಾಲಕರು, ಇಬ್ಬರು ಯುವತಿಯರು ಸೇರಿದಂತೆ ಮೂವರು ಮಹಿಳೆಯರು ಸೇರಿದ್ದಾರೆ.
"ಬರೈ ಬಲ್ಲಾ ಸೌಜಿಯಾನ್ ಎಂಬಲ್ಲಿ ಬುಧವಾರ ಈ ಅಪಘಾತ ಸಂಭವಿಸಿದೆ. ಸೇತುವೆಯೊಂದರ ಬಳಿ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಉರುಳಿತು" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಒಂಬತ್ತು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಾಳುಗಳನ್ನು ಅಕ್ಕಪಕ್ಕದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಗಾಯಾಳುಗಳ ಪೈಕಿ 13 ಮಂದಿಯನ್ನು ಪೂಂಚ್ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಮೂವರು ಮೃತಪಟ್ಟಿದ್ದಾರೆ" ಎಂದು ರಾಜೌರಿ ಪೂಂಚ್ ಡಿಐಜಿ ಡಾ.ಹಸೀಬ್ ಮುಘಲ್ ಹೇಳಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆರು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಮ್ಮುವಿಗೆ ವಿಮಾನದಲ್ಲಿ ಕರೆದೊಯ್ಯಲಾಗಿದೆ.
ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಹಾಗೂ ಗಾಯಾಳುಗಳ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಅವರು ಘೋಷಿಸಿದ್ದಾರೆ.







