ಉತ್ತರಪ್ರದೇಶದ ಬುಲ್ಡೋಝರ್ ಮಾದರಿ ಪಶ್ಚಿಮ ಬಂಗಾಳ ಅನುಸರಿಸಿದರೆ ಏನಾಗುತ್ತದೆ?: ಮಹುವಾ ಮೊಯಿತ್ರಾ
ಬಿಜೆಪಿ ರ‍್ಯಾಲಿಯಲ್ಲಿ ಹಿಂಸಾಚಾರ ಪ್ರಕರಣ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರಕಾರವು ಉತ್ತರ ಪ್ರದೇಶದ ಬುಲ್ಡೋಝರ್ ಮಾದರಿಯನ್ನು ಅನುಸರಿಸಬೇಕೇ, ಬಿಜೆಪಿ ನಾಯಕರ ಮನೆಗಳನ್ನು ನೆಲಸಮ ಮಾಡಬೇಕೇ? ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Trinamool Congress MP Mahua Moitra )ಬುಧವಾರ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಬಿಜೆಪಿಯ ಭಾರೀ ಪ್ರತಿಭಟನಾ ಮೆರವಣಿಗೆಯಲ್ಲಿ ಕೋಲ್ಕತ್ತಾ ಹಾಗೂ ಹೌರಾದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾದ ಒಂದು ದಿನದ ನಂತರ ಟಿಎಂಸಿ ಸಂಸದೆ ಈ ಹೇಳಿಕೆ ನೀಡಿದ್ದಾರೆ.
ಬಂಗಾಳವು ಭೋಗಿಜಿ ಅಜಯ್ ಬಿಷ್ಟ್ (ಯು.ಪಿ. ಸಿಎಂ ಆದಿತ್ಯನಾಥ್ ಅವರ ಜನ್ಮ ನಾಮ) ಅವರ ಮಾದರಿಯನ್ನು ಬಳಸಿ ನಿನ್ನೆ ಸಾರ್ವಜನಿಕರ ಆಸ್ತಿಪಾಸ್ತಿ ಧ್ವಂಸ ಮಾಡಿದ ಬಿಜೆಪಿ ಕಾರ್ಯಕರ್ತರ ಮನೆಗಳನ್ನು ಕೆಡವಬಹುದೇ? ಬಿಜೆಪಿ ತನ್ನದೇ ಆದ ನೀತಿಗೆ ಬದ್ಧವಾಗಿರುತ್ತದೆಯೇ ಅಥವಾ ತನ್ನ ಮಾತನ್ನು ತಿರುಚುತ್ತದೆಯೋ ? ”ಎಂದು ಮೊಯಿತ್ರಾ ಟ್ವೀಟ್‌ನಲ್ಲಿ ಕೇಳಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ರ್ಯಾಲಿಯಲ್ಲಿ ಜನರ ಗುಂಪೊಂದು ಪೊಲೀಸರಿಗೆ ಸೇರಿದ ಕಾರಿಗೆ ಬೆಂಕಿ ಹಚ್ಚುತ್ತಿರುವ ಫೋಟೋವನ್ನು ಹಂಚಿಕೊಂಡ ಮೊಯಿತ್ರಾ, ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಮೊದಲ ಅಧ್ಯಾಯವು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚುವುದು ಹೇಗೆ ಎಂದು ಕೇಳಿದೆ ಎಂದು ಟ್ವಿಟಿಸಿದ್ದಾರೆ.
ಮೊಯಿತ್ರಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ನಾಯಕ ರಾಹುಲ್ ಸಿನ್ಹಾ, ಟಿಎಂಸಿ ಸದಸ್ಯರು ಪಶ್ಚಿಮ ಬಂಗಾಳ ವಿಧಾನಸಭೆಯ ಆಸ್ತಿಗಳನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಅದೇ ಮಾನದಂಡವನ್ನು ಅನ್ವಯಿಸಬಹುದೇ ಎಂದು ಅವರು ಮೊದಲು ವಿವರಿಸಬೇಕು ಎಂದು ಹೇಳಿದರು.







