ಪುತ್ತೂರು: ಮಾಜಿ ಸಚಿವ ರಮಾನಾಥ ರೈ 71ನೇ ಹುಟ್ಟು ಹಬ್ಬ ಆಚರಣೆ

ಪುತ್ತೂರು: ದ.ಕ. ಜಿಲ್ಲೆ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿರುವ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರು ಸಮಾಜ ಸೇವೆಗಾಗಿಯೇ ಆಯುಷ್ಯವನ್ನು ಮುಡಿಪಾಗಿಟ್ಟವರು ಎಂದು ರಾಜ್ಯ ಧಾರ್ಮಿಕ ಪರಿಷತ್‍ನ ಮಾಜಿ ಸದಸ್ಯ ಎನ್.ಕೆ. ಜಗನ್ನಿವಾಸ್ ರಾವ್ ಹೇಳಿದರು.
ಅವರು ಗುರುವಾರ ಬೆಳ್ಳಿಪ್ಪಾಡಿ ರಮಾನಾಥ ರೈ ಅಭಿಮಾನಿ ಬಳಗದ ವತಿಯಿಂದ ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ನಡೆದ ರಮಾನಾಥ ರೈ ಅವರ 71ನೇ ಹುಟ್ಟು ಹಬ್ಬ ಆಚರಣೆ, ಆಶ್ರಮದ ಸದಸ್ಯರಿಗೆ ಬಟ್ಟೆ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಮಾನಾಥ ರೈ ಅವರೂ ಸಿದ್ದರಾಮಯ್ಯ ಅವರಂತೆ ಯಾವುದೇ ಅಪಾದನೆಗಳಿಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದವರು. ಮುಂದಿನ ಅವಧಿಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನಮ್ಮೆಲ್ಲರ ಜನನಾಯಕರಾಗಿರುವ ರಮಾನಾಥ ರೈ ಅವರು ಉನ್ನತ ಹುದ್ದೆಗೆ ಹೋಗಬೇಕು ಎಂದರು.
ಧಾರ್ಮಿಕ ಮುಖಂಡ ಕೆ.ಆರ್. ಹುಸೈನ್ ದಾರಿಮಿ ಮಾತನಾಡಿ ಹಸಿದವರಿಗೆ ಅನ್ನ, ತೊಡುಗೆ ಇಲ್ಲದವರಿಗೆ ವಸ್ತ್ರ ಹಾಗೂ ರೋಗಿಗಳಿಗೆ ಸೇವೆ ನೀಡುವುದು ಅವರಲ್ಲಿ ದೇವರನ್ನು ಕಾಣುವುದು ಆಗಿದೆ. ಪ್ರಜ್ಞಾ ಆಶ್ರಮದಲ್ಲಿ ಹುಟ್ಟು ಹಬ್ಬವನ್ನು ಆಚರಣೆ ಮಾಡುವ ಮೂಲಕ ರಮಾನಾಥ ರೈ ಅವರು ನಿಮ್ಮೊಂದಿಗೆ ನಾವು ಇದ್ದೇವೆ ಎಂದು ತೋರಿಸಿದ್ದಾರೆ. ಜಾತ್ಯಾತೀತ ಚಿಂತಕರಾದ ರಮಾನಾಥ ರೈ ಅವರು ರಾಜ್ಯಕ್ಕೆ ದೇವರು ಕೊಟ್ಟ ಕೊಡುಗೆ ಎಂದು ಬಣ್ಣಿಸಿದರು.
ಯುವ ವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ ಮಾತನಾಡಿ ರಮಾನಾಥ ರೈ ಅವರು ಎಂದೂ ಹಿಂದೂ ವಿರೋಧಿಯಲ್ಲ. ಆದರೆ ಎಲ್ಲರನ್ನೂ ಸಮಾನವಾಗಿ ಕಂಡವರು. ಅವರು ಸಾಕಷ್ಟು ಬ್ರಹ್ಮಕಲಶ ಇತರ ದಾರ್ಮಿಕ ಸೇವೆಗಳನ್ನು ನಡೆಸಿದ್ದಾರೆ. ಎಲ್ಲರನ್ನೂ ಪ್ರೀತಿಸುವ ಅವರೊಬ್ಬ ಸಮರ್ಥ ಹಿಂದೂ ನಾಯಕ. ಅವರನ್ನು ಹಿಂದೂ ವಿರೋಧಿ ಎಂದು ಟೀಕಿಸಿದವರಿಗೆ ತರ್ಕಬದ್ದ ಉತ್ತರವನ್ನು ನೀಡಿದ್ದಾರೆ ಎಂದರು.
ರಕ್ತವು ರಕ್ತನಾಳದಲ್ಲಿ ಹರಿಯಬೇಕು ಹೊರತು ಅದು ರಸ್ತೆಗೆ ಚೆಲ್ಲಿ ಹರಿಯಬಾರದು. ಜಿಲ್ಲೆಯಲ್ಲಿ ಇತ್ತೀಚೆಗೆ ಮೂವರ ರಕ್ತವು ರಸ್ತೆಯಲ್ಲಿ ಹರಿದಿದೆ. ಕಾಂಗ್ರೆಸ್‍ನಲ್ಲಿ ಎಂದಿಗೂ ರಕ್ತವನ್ನು ರಸ್ತೆಗೆ ಚೆಲ್ಲುವ ಸಿದ್ಧಾಂತವಿಲ್ಲ. ಈ ಸಿದ್ಧಾಂತದಲ್ಲಿ ಹೋದಲ್ಲಿ ಯಾವುದೇ ರಕ್ತಪಾತವಾಗಲು ಸಾಧ್ಯವಿಲ್ಲ ಎಂದರು.
ಪ್ರಜ್ಞಾ ಆಶ್ರಮ ನಿವಾಸಿಗಳೊಂದಿಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ ನಮ್ಮ ದೇಶಕ್ಕೆ ವಿಶಿಷ್ಟವಾಗಿ ಜಾತ್ಯಾತೀತ ಪರಂಪರೆಯಿದೆ. ನನ್ನನ್ನು ಜಾತೀವಾದಿ ಎನ್ನುವುದನ್ನು ನಾನು ಇಷ್ಟ ಪಡುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕಾಂಗ್ರೆಸ್ ಎಂಬುದು ನನ್ನ ಧರ್ಮ. ಆ ಪಕ್ಷಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಪ್ರಜ್ಞಾ ಆಶ್ರಮದ ನಿವಾಸಿಗಳಿಗೆ ಬಟ್ಟೆ ವಿತರಣೆ ಮಾಡಲಾಯಿತು. ಹಿರಿಯರಾದ ಸುದರ್ಶನ್ ಪಡಿಯಾರ್ ಮತ್ತು ಪ್ರಜ್ಞಾ ಆಶ್ರಮದ ಅಣ್ಣಪ್ಪ ಮತ್ತು ಜ್ಯೋತಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಮಹಿಳಾ ಕಾಲೇಜ್‍ನ ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿಸೋಜ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮಾತನಾಡಿದರು. ಎನ್‍ಎಸ್‍ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಯಬೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಹೆಗ್ಡೆ ಮತ್ತು ತಂಡದಿಂದ ಸಂಗೀತ ರಸಮಂಜರಿ ನಡೆಯಿತು.







