ಕಾಪು ಅಲ್ ರಿಹಾ ಸಹಕಾರಿ ಸಂಘದ ಮಹಾಸಭೆ

ಕಾಪು : ಅಲ್ ರಿಹಾ ವಿವಿಧೋದ್ದೇಶ ಸಹಕಾರಿ ಸಂಘ ಕಾಪು ಇದರ 2021-2022ನೇ ಸಾಲಿನಲ್ಲಿ ಮಾರ್ಚ್ ಅಂತ್ಯಕ್ಕೆ ಸಂಘವು 8.67 ಲಕ್ಷ ರೂ. ಲಾಭಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಟ್ ನೀಡುವುದಾಗಿ ಘೋಷಿಸಲಾಯಿತು.
ಕೊಪ್ಪಲಂಗಡಿಯ ಕಮ್ಯೂನಿಟಿ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಎಚ್. ಅಬ್ದುಲ್ಲ ಇವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ 2021-2022ನೇ ಸಾಲಿನ ಸರ್ವ ಸದಸ್ಯರ ಮಹಾ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು.
ಸಂಘದ ಕಾರ್ಯದರ್ಶಿ ಎ. ಪಿ. ಗೀತಾ ಮಂಡಿಸಿದ 2022-23ನೇ ಸಾಲಿನ 71.31 ಲಕ್ಷ ರೂ. ಅಂದಾಜು ಮುಂಗಡ ಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಕಾಪು ಪರಿಸರದ ಆರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 3000 ರೂ. ನಗದು ಮತ್ತು ಸ್ಮರಣಿಕೆ ಯೊಂದಿಗೆ ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕರೂ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಎಂ. ಪಿ. ಮೊಯಿದಿನಬ್ಬ ಅವರು ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, 2939 ಎ ವರ್ಗದ, 653 ಸಿ ಮತ್ತು 482 ಡಿ ವರ್ಗದ ಸದಸ್ಯರನ್ನು ಹೊಂದಿರುವ ಈ ಸಂಘವು ಇಸ್ಲಾಮಿ ಸಂಸ್ಕೃತಿಯ ಚೌಕಟ್ಟಿನೊಳಗೆ ಸರ್ಕಾರದ ಸಹಕಾರ ಇಲಾಖೆಯ ನಿಯಮದ ನ್ವಯ ಕಾರ್ಯಾಚರಿಸುತ್ತಿದ್ದು, ಸಂಘದ ಸದಸ್ಯರು ಆಡಳಿತ ಮಂಡಳಿಯ ಜೊತೆ ಸಹಕರಿಸುವಂತೆ ವಿನಂತಿಸಿದರು.
ಸಂಘವು ಕಳೆದ 17 ವರ್ಷಗಳಿಂದ ಸದಸ್ಯರ ತುರ್ತು ಅವಶ್ಯಕತೆ ಗಳಿಗೆ ಸ್ಪಂದಿಸುತ್ತಾ ಬಂದಿದ್ದು, ಈಗಾಗಲೇ ಪಡುಬಿದ್ರಿ ಶಾಖೆಗೆ ಸ್ವಂತ ಕಟ್ಟಡವನ್ನು ಖರೀದಿಸಿದೆ. ಆ ಭಾಗದ ಸದಸ್ಯರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಸಂಘದ ಕೇಂದ್ರ ಕಚೇರಿಯು ಎಲ್ಲಾ ಸದಸ್ಯರ ಸಹಕಾರದಿಂದ ಸ್ವಂತ ಕಟ್ಟಡವನ್ನು ಹೊಂದಿದೆ ಎಂದು ತಿಳಿಸಿದರು.
ನಿರ್ದೇಶಕರುಗಳಾದ ಮಹಮ್ಮದ್ ಫಕೀರ್, ನವೀದ್ ನಾಸಿರ್ ಶೇಖ್, ಮಹಮ್ಮದ್ ಸಾದಿಕ್, ಹಸನಬ್ಬ ಶೇಖ್, ಅಬ್ದುಲ್ ಹಮೀದ್, ಎಂ, ಇಸ್ಮಾಯಿಲ್, ಶಫಿ ಅಹಮದ್, ಯು. ಸಿ. ಶೇಖಬ್ಬ, ಝೀನತ್ ಬಾನು, ಸಬಿಹಾ ಖಾತೂನ್, ಫರೀದಾ ಬಾನು ಉಪಸ್ಥಿತರಿದ್ದರು.
ಸದಸ್ಯರಾದ ಅಬ್ಬು ಹಾಜಿ ಮೂಳೂರು ಹಾಗೂ ಇತರರು ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯದರ್ಶಿ ಗೀತಾ ಎ .ಪಿ. ಸ್ವಾಗತಿಸಿ, ಹಸನಬ್ಬ ಶೇಖ್ ವಂದಿಸಿದರು.