ಸೆ.20ರಿಂದ ಕೊಂಕಣ ರೈಲು ಮಾರ್ಗದಲ್ಲಿ ವಿದ್ಯುತ್ ರೈಲುಗಳ ಸಂಚಾರ

ಸಾಂದರ್ಭಿಕ ಚಿತ್ರ
ಉಡುಪಿ, ಸೆ.15: ಕೊಂಕಣ ರೈಲು ಮಾರ್ಗದಲ್ಲಿ ಸೆ. 20ರಿಂದ ವಿದ್ಯುತ್ ರೈಲುಗಳು ಸಂಚಾರ ತೊಡಗಲಿವೆ. ಮಹಾರಾಷ್ಟ್ರದ ರೋಹದಿಂದ ಮಂಗಳೂರಿನ ತೋಕೂರು ನಡುವೆ 741 ಕಿ.ಮೀ. ಕೊಂಕಣ ರೈಲು ಮಾರ್ಗ 1287 ಕೋಟಿ ರೂ.ವೆಚ್ಚದಲ್ಲಿ ಮಾರ್ಚ್ ತಿಂಗಳ ಕೊನೆಗೆ ಸಂಪೂರ್ಣ ವಿದ್ಯುದ್ದೀಕರಣಗೊಂಡಿದ್ದು ಕಳೆದ ಜೂ.20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಉದ್ಘಾಟಿಸಿದ್ದರು.
ಇದೀಗ ಈ ಮಾರ್ಗದಲ್ಲಿ ಸೆ.20ರ ಮಂಗಳವಾರದಿಂದ ವಿದ್ಯುತ್ ರೈಲುಗಳು ಸಂಚಾರ ಪ್ರಾರಂಭಿಸಲಿದ್ದು, ಇನ್ನು ಈ ಮಾರ್ಗದಲ್ಲಿ ರೈಲುಗಳ ಚುಕುಬುಕು.. ಚುಕುಬುಕು... ಸದ್ದು ಕೇಳಿ ಬರುವುದಿಲ್ಲ. ಸೆ.20ರಂದು ರೈಲು ನಂ.12617 ಎರ್ನಾಕುಲಂ ಜಂಕ್ಷನ್-ಎಚ್.ನಿಝಾಮುದ್ದೀನ್ ಮಂಗಳಾ ಲಕ್ಷದ್ವೀಪ ದೈನಂದಿನ ಎಕ್ಸ್ಪ್ರೆಸ್ ಹಾಗೂ ಸೆ.23ರ ಶುಕ್ರವಾರ 12618 ಎಚ್. ನಿಝಾಮುದ್ದೀನ್- ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ ದೈನಂದಿನ ಎಕ್ಸ್ಪ್ರೆಸ್ ವಿದ್ಯುತ್ ರೈಲು ಸಂಚಾರ ನಡೆಸಲಿದೆ.
ಅಲ್ಲದೇ ಸೆ.20ರಂದು ರೈಲು ನಂ.12432 ಎಚ್. ನಿಝಾಮುದ್ದೀನ್ -ತಿರುವನಂತಪುರಂ ಸೆಂಟ್ರಲ್ ರಾಜಧಾನಿ ಎಕ್ಸ್ಪ್ರೆಸ್, ಸೆ.23ರ ಶುಕ್ರವಾರ ರೈಲು ನಂ.2241ಎಚ್.ನಿಝಾಮುದ್ದೀನ್-ಮಡಗಾಂವ್ ಜಂಕ್ಷನ್ ರಾಜಧಾನಿ ಎಕ್ಸ್ಪ್ರೆಸ್, ಸೆ.22ರ ಗುರುವಾರ 12431 ತಿರುನಂತಪುರಂ ಸೆಂಟ್ರಲ್ -ಎಚ್.ನಿಝಾಮುದ್ದೀನ್ ರಾಜಧಾನಿ ಎಕ್ಸ್ಪ್ರೆಸ್ ಹಾಗೂ ಸೆ.25 ರವಿವಾರ 22413 ಮಡಗಾಂವ್ ಜಂಕ್ಷನ್- ಎಚ್.ನಿಝಾಮುದ್ದೀನ್ ರಾಜಧಾನಿ ಎಕ್ಸ್ಪ್ರೆಸ್ ವಿದ್ಯುತ್ ರೈಲು ಈ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.







