ಮೂಡುಬಿದಿರೆ; ಒಂಟಿ ಮಹಿಳೆಯ ಸುಲಿಗೆಗೈದ ಪ್ರಕರಣ: ಮೂವರ ಸೆರೆ

ಮಂಗಳೂರು, ಸೆ.15: ಮೂಡುಬಿದಿರೆ ತಾಲೂಕಿನ ಬಡಗಮಿಜಾರು ಗ್ರಾಮದ ಅಶ್ವಥಪುರ ಬೆರಿಂಜಗುಡ್ಡದ ಮನೆಯೊಂದರಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಬೆದರಿಸಿ ಸುಲಿಗೆಗೈದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಡಗಮಿಜಾರು ಗ್ರಾಮದ ದಿನೇಶ್ ಪೂಜಾರಿ (36), ಬೆಳ್ತಂಗಡಿ ತಾಲೂಕಿನ ಉಳಗುಡ್ಡ ಹೊಸಮನೆಯ ಸುಕೇಶ್ ಪೂಜಾರಿ (32), ಮೂಡುಬಿದಿರೆ ತಾಲೂಕಿನ ಮೂಡುಮಾರ್ನಾಡು ಗ್ರಾಮದ ಹರೀಶ್ ಪೂಜಾರಿ (34) ಬಂಧಿತ ಆರೋಪಿಗಳು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 1 ತಲವಾರು, 2 ಸ್ಕೂಟರ್, 3 ಮೊಬೈಲ್ ಫೋನ್, 2 ಮಂಕಿಕ್ಯಾಪ್ ಹಾಗೂ ಸುಲಿಗೆಗೈದ 62 ಗ್ರಾಂ ಚಿನ್ನಾಭರಣವನ್ನೂ ವಶಪಡಿಸಲಾಗಿದೆ. ಪೊಲೀಸರು ವಶಪಡಿಸಿಕೊಂಡ ಸೊತ್ತಿನ ಮೌಲ್ಯ 4.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಅಶ್ವಥಪುರ ಬೆರಿಂಜಗುಡ್ಡದ ಕಮಲಾ ಎಂಬಾಕೆಯ ಮನೆಗೆ ಅಕ್ರಮವಾಗಿ ನುಗ್ಗಿ ಕುತ್ತಿಗೆ ಹಿಸುಕಿ ತಲವಾರು ತೋರಿಸಿ ಜೀವ ಬೆದರಿಕೆ ಹಾಕಿ ಚಿನ್ನದ ಕರಿಮಣಿ ಸರ, ಚಿನ್ನದ ಬಳೆಯನ್ನು ಸುಲಿಗೆಗೈದಿದ್ದರು. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಗಳು ಗುರುತು ಮರೆಮಾಚುವ ಸಲುವಾಗಿ ಮಂಕಿಕ್ಯಾಪ್ ಹಾಗೂ ಹ್ಯಾಂಡ್ ಗ್ಲೌಸ್ ಧರಿಸಿದ್ದರು. ಆದಾಗ್ಯೂ ಪೊಲೀಸ್ ಆಯುಕ್ತ ಶಶಿಕುಮಾರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಚಿನ್ನಾಭರಣ ಮಾರಾಟ ಮಾಡಲು ಮಂಗಳೂರಿಗೆ ಬರುತ್ತಿದ್ದ ಮೂವರು ಆರೋಪಿಗಳನ್ನು ಗುರುವಾರ ನಗರದ ಕುಲಶೇಖರ ಚರ್ಚ್‌ಗೇಟ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಂಟಿ ಮಹಿಳೆ ಕಮಲಾ ಅವರಿಗೆ ಸಂಬಂಧಿಕರಾರೂ ಸಮೀಪದಲ್ಲಿ ಇಲ್ಲದಿರುವುದನ್ನು ಗಮನಿಸಿದ ಆರೋಪಿಗಳು ಸುಲಿಗೆ ಕೃತ್ಯ ನಡೆಸಿದ್ದರು. ಸುಲಿಗೆ ಮಾಡಿದರೆ ಯಾರೂ ದೂರು ನೀಡಲು ಬರುವುದಿಲ್ಲ ಎಂದು ಭಾವಿಸಿದ್ದರು. ಅಲ್ಲದೆ ಆಕೆಗೆ ಹಲ್ಲೆ ನಡೆಸಿದ ಬಳಿಕ ಆರೋಪಿಯೊಬ್ಬ ಸಹಾಯ ಮಾಡುವಂತೆ ನಟಿಸಿ ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಾದ ದಿನೇಶ್ ಪೂಜಾರಿ, ಸುಕೇಶ್ ಪೂಜಾರಿ, ಹರೀಶ್ ಪೂಜಾರಿಯ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಅಡಕೆ ಕಳವು ಪ್ರಕರಣ, ಸುಕೇಶ್ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪೋಕ್ಸೊ ಮತ್ತು ಮಣಿಪಾಲ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.







