ರಶ್ಯ ಅಧ್ಯಕ್ಷ ಪುಟಿನ್ ಹತ್ಯೆ ಯತ್ನದಿಂದ ಪಾರು: ವರದಿ

ಮಾಸ್ಕೊ, ಸೆ.15: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತೊಮ್ಮೆ ಹತ್ಯೆಯ ಯತ್ನದಿಂದ ಪಾರಾಗಿರುವುದಾಗಿ `ಯುರೋವೀಕ್ಲಿ' ವರದಿ ಮಾಡಿದೆ. ಪುಟಿನ್ ಪ್ರಯಾಣಿಸುತ್ತಿದ್ದ ಕಾರಿನ ಎದುರುಭಾಗದ ಟಯರ್ ಬಳಿ ಸ್ಫೋಟ ಸಂಭವಿಸಿದ್ದು ಅಧ್ಯಕ್ಷರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ . ಈ ಕುರಿತ ವರದಿಯನ್ನು ಜನರಲ್ ಜಿವಿಆರ್ ಟೆಲಿಗ್ರಾಂ ಚಾನೆಲ್‍ನಲ್ಲಿ ಬುಧವಾರ ಬಿಡುಗಡೆಗೊಳಿಸಲಾಗಿದೆ, ಆದರೆ ಹತ್ಯೆಯ ಪ್ರಯತ್ನ ಯಾವಾಗ ನಡೆದಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಮೂಲಗಳು ಹೇಳಿವೆ.
ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸಲಾಗಿದೆ. ಪುಟಿನ್ ಅವರ ಕಾರ್ಯಕ್ರಮಗಳ ಬಗ್ಗೆ, ಅವರು ಸಂಚರಿಸುವ ರಸ್ತೆಯ ಬಗ್ಗೆ ಕೆಲವೇ ವ್ಯಕ್ತಿಗಳಿಗೆ ಮಾತ್ರ ತಿಳಿದಿರುವುದರಿಂದ ಪುಟಿನ್ ಆಪ್ತವಲಯದವರ ಕೈವಾಡದ ಶಂಕೆ ಮೂಡಿದೆ. ಅಧ್ಯಕ್ಷರ ಅಂಗರಕ್ಷಕ ದಳದ ಮುಖ್ಯಸ್ಥರು ಹಾಗೂ ಇತರ ಹಲವು ಅಧಿಕಾರಿಗಳನ್ನು ಅಮಾನತುಗೊಳಿಸಿ ವಶಕ್ಕೆ ಪಡೆಯಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಆದರೆ ರಶ್ಯದಲ್ಲಿ ಮಾಧ್ಯಮಗಳಿಗೆ ಸೆನ್ಸಾರ್ ವಿಧಿಸಿರುವ ಕಾರಣ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪುಟಿನ್ ಅವರ ಹತ್ಯೆಗೆ ಹಲವು ಬಾರಿ ಪ್ರಯತ್ನ ನಡೆದಿರುವ ಹಿನ್ನೆಲೆಯಲ್ಲಿ ಅವರು ವಾಹನಗಳ ಬೆಂಗಾವಲಿನಲ್ಲಿ ಪ್ರಯಾಣಿಸುತ್ತಿದ್ದರು.
ಪುಟಿನ್ ಅವರು ಅಧ್ಯಕ್ಷೀಯ ನಿವಾಸಕ್ಕೆ ತೆರಳುತ್ತಿದ್ದಾಗ ಮನೆಗಿಂತ ಕೆಲವು ಮೀಟರ್‍ಗಳಷ್ಟು ದೂರದಲ್ಲಿ ಮೊದಲ ಬೆಂಗಾವಲು ಕಾರನ್ನು ಆಂಬ್ಯುಲೆನ್ಸ್‍ನಿಂದ ನಿರ್ಬಂಧಿಸಲಾಯಿತು. ಆಗ ಪುಟಿನ್ ಪ್ರಯಾಣಿಸುತ್ತಿದ್ದ ಲಿಮೋಸಿನ್ ಕಾರು ಹಠಾತ್ತಾಗಿ ನಿಂತಿದ್ದು ಅದರ ಹಿಂದಿದ್ದ ಎರಡನೇ ಬೆಂಗಾವಲು ಕಾರು ಪುಟಿನ್ ಕಾರನ್ನು ದಾಟಿ ಮುಂದೆ ಸಾಗಿದೆ. ಅಷ್ಟರಲ್ಲಿ ಪುಟಿನ್ ಇದ್ದ ಕಾರಿನ ಎಡಬದಿಯ ಮುಂಭಾಗದ ಚಕ್ರದ ಬಳಿ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಕಾರಿನ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡರೂ ಚಾಲಕ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಅಧ್ಯಕ್ಷರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾನೆ ಎಂದು ವರದಿಯಾಗಿದೆ.
ತನ್ನ ಹತ್ಯೆಗೆ ಕನಿಷ್ಟ 5 ಬಾರಿ ಪ್ರಯತ್ನ ನಡೆದಿದೆ ಎಂದು 2017ರಲ್ಲಿ ಪುಟಿನ್ ಬಹಿರಂಗಗೊಳಿಸಿದ್ದರು. ಉಕ್ರೇನ್ ಮೇಲಿನ ಆಕ್ರಮಣದ ಬಳಿಕ ಪುಟಿನ್ ಅವರ ಅನಾರೋಗ್ಯ ಹಾಗೂ ಅವರಿಗಿರುವ ಜೀವ ಬೆದರಿಕೆಯ ಬಗ್ಗೆ ವದಂತಿಗಳು ಹೆಚ್ಚಿವೆ. ಕೆಲ ವಾರಗಳ ಹಿಂದೆ ಸೈಂಟ್ ಪೀಟರ್ಸ್‍ಬರ್ಗ್‍ನ ರಾಜಕಾರಣಿಗಳ ತಂಡವೊಂದು ಪುಟಿನ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಅವರನ್ನು ಪದಚ್ಯುತಗೊಳಿಸುವಂತೆ ಆಗ್ರಹಿಸಿ ರಶ್ಯದ ಸಂಸತ್‍ಗೆ ಪತ್ರ ಬರೆದಿದ್ದರು. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯ ಸೇನೆಗೆ ಆಗಿರುವ ಅಪಾರ ನಷ್ಟ ಹಾಗೂ ಪಾಶ್ಚಿಮಾತ್ಯರ ನಿರ್ಬಂಧದಿಂದ ಅರ್ಥವ್ಯವಸ್ಥೆಗೆ ಆಗಿರುವ ಹಾನಿಯ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ಪತ್ರದಲ್ಲಿ ವಿವರಿಸಲಾಗಿತ್ತು. ಜತೆಗೆ, ಸೈಂಟ್ ಪೀಟರ್ಸ್‍ಬಗ್, ಮಾಸ್ಕೋ ಹಾಗೂ ಇತರ ವಲಯಗಳ 65 ಪುರಸಭೆ ಪ್ರತಿನಿಧಿಗಳು ಪುಟಿನ್ ರಾಜೀನಾಮೆಗೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ನಡೆಸಿರುವುದಾಗಿಯೂ ವರದಿಯಾಗಿದೆ.