ವಿಶ್ವೇಶ್ವರಯ್ಯ ಆಧುನಿಕ ಮೈಸೂರಿನ ಕೃರ್ತ: ಡಾ.ಭಾಸ್ಕರ್ ಶೆಟ್ಟಿ

ಉಡುಪಿ, ಸೆ.15: ಆಧುನಿಕ ಮೈಸೂರಿನ ಚರಿತ್ರೆಯನ್ನು ವಿಶ್ವೇಶ್ವರಯ್ಯರವರನ್ನು ಹೊರತು ಪಡಿಸಿ ಬರೆಯಲು ಸಾಧ್ಯವೇ ಇಲ್ಲ. ವಸಾಹತುಶಾಹಿ ಭಾರತದ ಬಹುತೇಕ ಸಮಸ್ಯೆಗಳಿಗೆ ಕೈಗಾರಿಕರಣ ಮತ್ತು ತಾಂತ್ರಿಕತೆಯೇ ಪರಿಹಾರ ಎಂಬುದಾಗಿ ವಿಶ್ವೇಶ್ವರಯ್ಯ ಗಟ್ಟಿಯಾಗಿ ನಂಬಿದ್ದರೆಂದು ಉಡುಪಿ ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಸ್.ಭಾಸ್ಕರ್ ಶೆಟ್ಟಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಬ್ರಹ್ಮಗಿರಿಯ ಎಜಿಎ ಕಂಟಿಲ್ವರ್‌ನಲ್ಲಿ ಆಯೋಜಿಸಲಾದ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನಾ ಚರಣೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ವಿಶ್ವೇಶ್ವರಯ್ಯ ಕೈಯಾಡಿಸದ ಕ್ಷೇತ್ರವೇ ಇಲ್ಲ. ಎಲ್ಲ ಕ್ಷೇತ್ರದಲ್ಲೂ ಕೈ ಆಡಿಸಿ ಸೈ ಎನಿಸಿಕೊಂಡ ಧೀಮಂತ ವ್ಯಕ್ತಿ. ಆತ್ಮಾವಲೋಕನ, ಬದ್ಧತೆ ಹಾಗೂ ಸಮಯಪ್ರಜ್ಞೆ ಹೊಂದಿದ್ದ ಪ್ರಗತಿಪರ ವ್ಯಕ್ತಿ ಎಂದರು.
ಕಾರ್ಯಕ್ರಮವನ್ನು ಕನ್ನಡ ಭವನ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್ ಕಟ್ಟಿಂಗೇರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಈ ಸಂದರ್ಭದಲ್ಲಿ ಪರಿಣಿತ ಇಂಜಿನಿಯರ್ ಎಂ.ಗೋಪಾಲ ಭಟ್ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ನುಡಿದರು. ಗೌರವ ಕೋಶಾಧ್ಯಕ್ಷ ಮನೋಹರ್ ಪಿ. ಸನ್ಮಾನ ಪತ್ರ ವಾಚಿಸಿದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.







