ಕರಾವಳಿ ಜಿಲ್ಲೆಗಳಲ್ಲಿ ಗುಡ್ಡಗಾಡು, ಇಳಿಜಾರು ಪ್ರದೇಶದಲ್ಲಿ ಮನೆ ನಿರ್ಮಿಸಲು ನೀತಿ ರೂಪಿಸಿ: ಯು.ಟಿ.ಖಾದರ್

ಬೆಂಗಳೂರು, ಸೆ.15: ಕರಾವಳಿ ಜಿಲ್ಲೆಗಳಲ್ಲಿ ಗುಡ್ಡಗಾಡು, ಇಳಿಜಾರು ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಲು ರಾಜ್ಯ ಸರಕಾರ ಒಂದು ನೀತಿ ರೂಪಿಸಬೇಕು. ಇದರಿಂದಾಗಿ, ಗುಡ್ಡಗಾಡು ಹಾಗೂ ಇಳಿಜಾರು ಪ್ರದೇಶಗಳಲ್ಲಿ ಭೂ ಕುಸಿತದಿಂದ ಆಗುವಂತಹ ಅನಾಹುತಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು ಎಂದು ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಹೇಳಿದರು.
ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ವರ್ಷ ಮಳೆಯಿಂದಾಗಿ ಹಾನಿಯಾದ 22 ಮನೆಗಳಿಗೆ 5 ಲಕ್ಷ ರೂ.ಗಳ ಪರಿಹಾರ ಇನ್ನೂ ಫಲಾನುಭವಿಗಳಿಗೆ ಬಂದಿಲ್ಲ ಎಂದರು.
ಕಡಲ್ಕೊರೆತ ತಡೆಯುವಲ್ಲಿ ವಿಫಲ: ಅತೀ ಹೆಚ್ಚು ಮಳೆಯಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಕಡಲ್ಕೊರೆತ ಆಗಿದೆ. ರಸ್ತೆಗಳು ಹಾಳಾಗಿವೆ. ಕಳೆದ ಮೂರು ವರ್ಷಗಳಲ್ಲಿ ಕರಾವಳಿ ಭಾಗದಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿಲ್ಲ. ಕಾಮಗಾರಿಗಳನ್ನು ಮಾಡಿರುವವರಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಖಾದರ್ ಹೇಳಿದರು.
ಬಂದರು ಹಾಗೂ ಮೀನುಗಾರಿಕೆ ಇಲಾಖೆಯನ್ನು ನಂಬಿ ಕೆಲಸ ಮಾಡಿದ ನಂತರ ಹಣ ಪಡೆಯಲು ಬೆಂಗಳೂರಿಗೆ ಬರಬೇಕು. ಇಲ್ಲಿ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಮಾಡುವವರಿಗೆ ಹಣ ಬಿಡುಗಡೆ ನೀಡುವುದಿಲ್ಲ. 2014ರಲ್ಲಿ ಎಡಿಬಿ ಯೋಜನೆ ಆರಂಭವಾದಾಗ, ಬಂದರು ಇಲಾಖೆಯಲ್ಲಿ ಕಡಲ್ಕೊರೆತ ನಿರ್ವಹಣೆಗೆ ಹಣ ಇಡಬೇಕು. ಆದರೆ, ನಿರ್ವಹಣೆ ಮಾಡಲು ನಿಮ್ಮ ಬಳಿ ಹಣವೇ ಇಲ್ಲ ಎಂದು ಅವರು ತಿಳಿಸಿದರು.
ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಭಾರಿ ಹೊಡೆತ ಬಿತ್ತು. ಎರಡು ಬಾರಿ ನಾನು ಲಿಖಿತವಾಗಿ ತನಿಖೆ ನಡೆಸುವಂತೆ ಮನವಿ ಮಾಡಿದೆ. ಸೋಮೇಶ್ವರ, ಉಚ್ಚಿಲ ಸುತ್ತಲಿನ ಗ್ರಾಮಗಳಿಗೆ ಹೋಗಲು ಸಂಪರ್ಕ ಇಲ್ಲ. ಮಾನವೀಯತೆ, ಕರುಣೆ ಇಲ್ಲದ ಸರಕಾರ ನಾವು ನೋಡುತ್ತಿದ್ದೇವೆ ಎಂದು ಖಾದರ್ ಕಿಡಿಗಾರಿದರು.
ನೈಸರ್ಗಿಕ ವಿಕೋಪಗಳಿಂದ ಎದುರಾಗುವ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಕರಾವಳಿ ಭಾಗದ ಜಿಲ್ಲೆಗಳಿಗೆ ಸಿದ್ದರಾಮಯ್ಯ ಸರಕಾರ ತಲಾ 6 ಕೋಟಿ ರೂ.ಗಳ ವಿಶೆಷ ಅನುದಾನ ನೀಡಿತ್ತು. ಅದೇ ರೀತಿ ಈಗಲೂ ಸರಕಾರ ವಿಶೇಷ ಅನುದಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಮಳೆಯಿಂದ ಮನೆಗಳನ್ನು ಕಳೆದುಕೊಂಡಿರುವವರಿಗೆ ರೇಷನ್‍ಕಾರ್ಡ್ ಕೊಡಲು ಈ ಸರಕಾರಕ್ಕೆ ಆಗುತ್ತಿಲ್ಲ. ಶೇ.5ರಷ್ಟು ಕಳ್ಳರನ್ನು ಹಿಡಿಯಲು ಹೋಗಿ ಶೇ.95ರಷ್ಟು ಅರ್ಹರಿಗೆ ತೊಂದರೆ ಕೊಡುವಂತಾಗಿದೆ. ಬಿಪಿಎಲ್ ಕಾರ್ಡು ಕಳೆದುಕೊಂಡವರಿಗೆ ಕಾರ್ಡು ಕೊಡುವ ಕೆಲಸ ಮಾಡಬೇಕು. ರಸ್ತೆಗಳು ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ. ಗುತ್ತಿಗೆದಾರರು ಸಮಸ್ಯೆಗೆ ಸಿಲುಕಿದ್ದಾರೆ ಎಂದು ಖಾದರ್ ಹೇಳಿದರು.
ಮೀನುಗಾರರ ಸಮಸ್ಯೆಗಳಿಗೆ ಈ ಸರಕಾರ ಸ್ಪಂದಿಸಿಲ್ಲ. ಮಳೆಯಿಂದಾಗಿ ಅವರ ಬೋಟುಗಳನ್ನು ಇಡಲು ಜಾಗ ಇಲ್ಲ, ಶೆಡ್ ಇಲ್ಲ, ಮೀನುಗಾರರಿಗೆ ಮನೆ ಕೊಟ್ಟಿಲ್ಲ. ಕರಾವಳಿ ಜಿಲ್ಲೆಯಲ್ಲಿ ಎಲ್ಲರೂ ನಿಮಗೆ ಮತ ನೀಡಿದರು. ಈ ಬಾರಿ ಮೀನುಗಾರರು ಯಾರು ನಿಮಗೆ ಮತ ನೀಡುವುದಿಲ್ಲ ಎಂದು ಖಾದರ್ ಹೇಳಿದರು.
ಕಾಮಗಾರಿ ಮಾಡುವಾಗ ಜಿಲ್ಲಾಧಿಕಾರಿ ಕ್ರಿಯಾ ಯೋಜನೆ ಮಾಡಬೇಕು. ಬಿಜೆಪಿ ಶಾಸಕರು ಮೀನುಗಾರರ ಬಗ್ಗೆ ಮಾತನಾಡಲ್ಲ. ನಾನೇ ಮಾತನಾಡಬೇಕು. ಮುಂದೆ ಅವರು ನಿಮಗೆ ಬೆಂಬಲ ನೀಡಲು ಸಾಧ್ಯವೇ ಇಲ್ಲ. ಮೀನುಗಾರರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಒಬ್ಬ ಮೀನುಗಾರ ಸಿಗಲಿಲ್ಲವೇ? ಮೊಗವೀರರು ನಿಮಗೆ ಕ್ಷಮಿಸುತ್ತಾರಾ? ಎಂದು ಖಾದರ್ ಪ್ರಶ್ನಿಸಿದರು.







