ಮೂರ್ನಾಲ್ಕು ತಿಂಗಳಲ್ಲಿ ‘ಗ್ರಾ.ಪಂ’ಗಳಲ್ಲಿ ಖಾಲಿ ಇರುವ ಶೇ.90ರಷ್ಟು ಹುದ್ದೆಗಳ ಭರ್ತಿ: ಸಿಎಂ ಬೊಮ್ಮಾಯಿ

ವಿಧಾನ ಪರಿಷತ್ ಗೆ ಆಗಮಿಸುತ್ತಿರುವ ಸಿಎಂ ಬೊಮ್ಮಾಯಿ
ಬೆಂಗಳೂರು, ಸೆ.15: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಖಾಲಿಯಿರುವ ಹುದ್ದೆಗಳಲ್ಲಿ ಕನಿಷ್ಠ ಶೇ.90ರಷ್ಟು ಹುದ್ದೆಗಳನ್ನ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ್ ಭಂಡಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜನರಿಗೆ ಉತ್ತಮ ಆಡಳಿತವನ್ನು ನೀಡಲು ಅನುಕೂಲವಾಗುವಂತೆ ಖಾಲಿ ಇರುವ ಪಿಡಿಓಗಳ ಪೈಕಿ 326 ಪಿಡಿಓಗಳು, 635 ಗ್ರೇಡ್-1 ಕಾರ್ಯದರ್ಶಿಗಳು, 340 ಗ್ರೇಡ್-2 ಕಾರ್ಯದರ್ಶಿಗಳು, 625 ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳನ್ನು 3-4 ತಿಂಗಳೊಳಗಾಗಿ ನೇಮಕ ಮಾಡಿಕೊಳ್ಳಲಾಗುವುದು ಹಾಗೂ ಇನ್ನು ಕೆಲವು ಹುದ್ದೆಗಳನ್ನು ಭಡ್ತಿ ಮೂಲಕ ತುಂಬಲಾಗುವುದು ಎಂದು ತಿಳಿಸಿದರು.
ಅಮೃತ ಯೋಜನೆಯಡಿ ಆಯ್ಕೆ: ರಾಜ್ಯದಲ್ಲಿ ಕುಡಿಯುವ ನೀರು, ಸ್ವಚ್ಛತೆ, ನವೀಕರಣ, ಗ್ರಂಥಾಲಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ 750 ಗ್ರಾಮ ಪಂಚಾಯಿತಿಗಳನ್ನು ಅಮೃತ ಗ್ರಾಪಂ ಯೋಜನೆಯಡಿ ಆಯ್ಕೆ ಮಾಡಿದ್ದು, ಪ್ರತಿಯೊಂದು ‘ಗ್ರಾಪಂ’ಗೂ ತಲಾ 25 ಲಕ್ಷ ರೂ. ಅನುದಾನ ನೀಡಲಾಗಿದೆ. ಗ್ರಾಮ ಪಂಚಾಯಿತಿಗಳ ಸಬಲೀಕರಣ ಮಾಡುವ ಮೂಲಕ ಅವುಗಳ ಮುಖಾಂತರ ಜನರಿಗೆ ಉತ್ತಮ ಆಡಳಿತ ನೀಡಬೇಕು ಎನ್ನುವುದು ಸರಕಾರದ ಉದ್ದೇಶ ಎಂದು ಅವರು ತಿಳಿಸಿದರು.
'ಗ್ರಾಪಂ’ ಗಾಂಧಿ ಗ್ರಾಮ ಪುರಸ್ಕಾರ: ಪರಿಶೀಲನೆಯಲ್ಲಿ
2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಶೂನ್ಯ ವೇಳೆಯಲ್ಲಿ ಮಂಡಿಸಿದ ಸೂಚನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, 2013-14ರಿಂದ ಉತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯತಿಗಳಿಗೆ ತಾಲೂಕಿಗೆ ಒಂದರಂತೆ ಗಾಂಧಿ ಗ್ರಾಮ ಪುರಸ್ಕಾರ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಸೀಮಾ ಆಯೋಗ ವರದಿ ಪರಿಶೀಲಿಸಿ ಪಂಚಾಯಿತಿ ಚುನಾವಣೆ
ಕ್ಷೇತ್ರ ಪುನರ್ ವಿಂಗಡಣೆ ಸಂಬಂಧ ರಚಿಸಿರುವ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ವರದಿ ಸಲ್ಲಿಸಿದ ನಂತರ ಪರಿಶೀಲಿಸಿ ಜಿಪಂ ಮತ್ತು ತಾಪಂ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗುರುವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಅವರು ಉತ್ತರಿಸಿದರು.
ಈ ವರ್ಷವೇ ರಾಜ್ಯದಲ್ಲಿ ಗ್ರಾಮೀಣ ಕ್ರೀಡಾಕೂಟ
ರಾಜ್ಯದಲ್ಲಿ ಈ ವರ್ಷ ಗ್ರಾಮೀಣ ಕ್ರೀಡಾಕೂಟ ನಡೆಸಲು ಸರಕಾರ ಮುಂದಾಗಿದೆ. ಗ್ರಾಪಂ, ತಾಪಂ, ಜಿಪಂ ಮತ್ತು ರಾಜ್ಯ ಮಟ್ಟದಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅಕ್ರಮ ಖಾತೆ ಜಂಟಿ ಆಯುಕ್ತರ ವಿರುದ್ಧ ಎಫ್ಐಆರ್
ಬೆಂಗಳೂರಿನ ದಕ್ಷಿಣ ತಾಲೂಕಿನ ಪುಟ್ಟೇನಹಳ್ಳಿ ಗ್ರಾಮದ ಸರ್ವೇ ನಂ.39ರಲ್ಲಿ ನಿವೇಶನಕ್ಕೆ ಅಕ್ರಮವಾಗಿ ಖಾತೆ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಆಯುಕ್ತ ಸೇರಿದಂತೆ ಹಲವು ಅಧಿಕಾರಿ, ನೌಕರರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಆಗಿನ ಜಂಟಿ ಆಯುಕ್ತರು ನಿವೃತ್ತರಾಗಿದ್ದಾರೆ. ಆದರೂ ಅವರ ವಿರುದ್ಧ ವಿಚಾರಣೆ ನಡೆಯುತ್ತಿದ್ದು, ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು







