ಉಚ್ಚಿಲದಲ್ಲಿ ತಂದೆ-ಮಗನ ಸಾವಿಗೆ ಕಾರಣವಾದ ಲಾರಿ ಚಲಾಯಿಸಿದ್ದು 16 ವರ್ಷದ ಬಾಲಕ!
ಲಾರಿಯನ್ನು ವಶಕ್ಕೆ ಪಡೆದ ಪಡುಬಿದ್ರೆ ಪೊಲೀಸರು

ಪಡುಬಿದ್ರೆ, ಸೆ.16: ಉಚ್ಚಿಲದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಂದೆ- ಮಗನ ಸಾವಿಗೆ ಕಾರಣವಾದ ಲಾರಿಯನ್ನು ಅಪಘಾತದ ಸಂದರ್ಭ ಚಲಾಯಿಸುತ್ತಿದ್ದದ್ದು ಲಾರಿಯ ಕ್ಲೀನರ್ ಆಗಿದ್ದ 16 ವರ್ಷದ ಬಾಲಕ ಎಂದು ತಿಳಿದುಬಂದಿದೆ.
ಬುಧವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಮಹಾಲಕ್ಷ್ಮೀ ಇಂಗ್ಲೀಷ್ ಮೀಡಿಯಂ ಶಾಲೆಯ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಬೆಳಗಾವಿ ಮೂಲದ ಪ್ರಭಾಕರ್ ಶಂಕರ್ ಮತ್ತು ಅವರ 13 ವರ್ಷದ ಸಮರ್ಥ್ ರಿಗೆ ಲಾರಿಯೊಂದು ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿತ್ತು. ಅಪಘಾತದ ತೀವ್ರತೆಗೆ ಪ್ರಭಾಕರ್ ಮೃತಪಟ್ಟಿದ್ದರೆ, ಆಸ್ಪತ್ರೆಗೆ ದಾಖಲಾಗಿದ್ದ ಚಿಕಿತ್ಸೆ ಫಲಿಸದೆ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಈ ನಡುವೆ ಅಪಘಾತಕ್ಕೆ ಕಾರಣವಾಗಿದ್ದ ಗೂಡ್ಸ್ ಲಾರಿಯನ್ನು ಪೊಲೀಸರು ಸಿಸಿಟಿವಿ ಫೂಟೇಜ್‌ಗಳನ್ನು ಆಧರಿಸಿ ಪತ್ತೆಹಚ್ಚಿ, ಅದರ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆತನನ್ನು ವಿಚಾರಣೆ ನಡೆಸಿದಾಗ 16 ವರ್ಷದ ಬಾಲಕ ರಾತ್ರಿಯಿಡೀ ಲಾರಿ ಚಲಾಯಿಸಿಕೊಂಡು ಬಂದಿದ್ದ ಎಂದು ಬಾಯಿಬಿಟ್ಟಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಲಾರಿಯಲ್ಲಿ ಪ್ಲಾಸ್ಟಿಕ್ ಉತ್ಪಾದನೆಯ ಕಚ್ಚಾವಸ್ತುಗಳನ್ನು ಗುಜರಾತ್‌ನಿಂದ ಹೇರಿಕೊಂಡು ಬರಲಾಗುತಿತ್ತು. ಅಪಘಾತದ ತಪ್ಪಿಸಿಕೊಂಡಿದ್ದ ಲಾರಿಯನ್ನು ಗಂಜಿಮಠದಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿ ಲಾರಿ ಶೇಖರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಾಲಕನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.
ಕಾಪು ಬಳಿಯ ಆನೆಗುಂದಿ ಸರಸ್ವತಿ ಪೀಠದಿಂದ ಚೌತಿ ಹಬ್ಬಕ್ಕೆ ರಜೆಯಲ್ಲಿ ಊರಿಗೆ ತೆರಳಿದ್ದ ಏಳನೇ ತರಗತಿಯ ಸಮರ್ಥ್, ಮಂಗಳವಾರ ಸಂಜೆ ಬೆಳಗಾವಿಯ ಹುಕ್ಕೇರಿ ಭಗವಾನ್ ಗಲ್ಲಿಯ ನಿವಾಸಿ ತಂದೆ ಪ್ರಭಾಕರ್ ಅವರೊಂದಿಗೆ ಹೊರಟವರು ಉಚ್ಚಿಲಕ್ಕೆ ಬುಧವಾರ ಬೆಳಗ್ಗೆ ಸರಕಾರಿ ಬಸ್ಸಿನಲ್ಲಿ ಆಗಮಿಸಿದ್ದರು. ಈ ವೇಳೆ ಈ ಅಪಘಾತ ನಡೆದಿದೆ.









