ಕಾಂಗ್ರೆಸ್ ಆಡಳಿತ ಅಕ್ರಮಗಳ ಗಂಗೊತ್ರಿ: ಶಾಸಕ ಪಿ.ರಾಜೀವ್

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಬಿಜೆಪಿ ಮುಖಂಡರು
ಬೆಂಗಳೂರು, ಸೆ.16: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ 2013ರಲ್ಲಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಪರೀಕ್ಷೆಯನ್ನೇ ಬರೆಯದವರಿಗೆ ನೇಮಕಾತಿ ಆದೇಶ ಕೊಡಲಾಗಿದೆ. ಅಂಥವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಬಿಜೆಪಿ ಶಾಸಕ ಪಿ.ರಾಜೀವ್ ದೂರಿದರು.
ಶುಕ್ರವಾರ ವಿಧಾನಸೌಧದಲ್ಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಶಿಕ್ಷಣ ಸಚಿವ ನಾಗೇಶ್ ಇದರ ಸುಳಿವು ಪಡೆದು ವಿವರವಾದ ವರದಿ ಪಡೆದರು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಕ್ಷಕರ ಹುದ್ದೆ ನಿರ್ವಹಿಸುತ್ತಿದ್ದ ಸುಮಾರು 30 ಜನರನ್ನು ದಸ್ತಗಿರಿ ಮಾಡಿದ್ದಾರೆ ಎಂದರು.
ಈ ಅಕ್ರಮ ನೇಮಕಾತಿಗೆ ಕಾರಣ ಯಾರು? ಕಾಂಗ್ರೆಸ್ಸಿಗರು ತಮ್ಮ ಅವಧಿಯಲ್ಲಿ ರಾಜ್ಯದ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಯಾವ ರೀತಿ ನ್ಯಾಯ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದ ಅವರು, ಪಿಎಸ್ಐ ನೇಮಕಾತಿ ಅಕ್ರಮದ ಕುರಿತಂತೆ ಪಾರದರ್ಶಕ ತನಿಖೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅವಧಿಯಲ್ಲಿ ನಡೆದಿದ್ದ ಅಕ್ರಮ ನೇಮಕಾತಿಗಳನ್ನು ಬಿಜೆಪಿಯು ಜನತೆ ಮುಂದಿಡಲಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
2013ರಿಂದ 2017ರವರೆಗೆ ಡಿವೈಎಸ್ಪಿ, ಪಿಎಸ್ಐ, ಎಫ್ಡಿಸಿ, ಎಸ್ಡಿಸಿ ಮತ್ತಿತರ ಹುದ್ದೆಗಳನ್ನು ಕೊಡಿಸುವುದಾಗಿ ಮಂಜುನಾಥ್ ಎಂಬವರು ಸುಮಾರು 18 ಕೋಟಿ ಹಣವನ್ನು ಸಾರ್ವಜನಿಕರಿಂದ ವಸೂಲಿ ಮಾಡಿದ್ದು, ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿದ್ದಾರೆ ಎಂದು 2018ರಲ್ಲಿ ದೂರು ದಾಖಲಾಗಿತ್ತು ಎಂದು ಅವರು ಹೇಳಿದರು.
ಲಕ್ಷ್ಮೀಕಾಂತ್ ಹಾಗೂ ಲೋಕೇಶ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿತ್ತು. ಇವರಿಬ್ಬರೂ ಸಿದ್ದರಾಮಯ್ಯರ ಏಜೆಂಟರೆಂದು ಎಫ್ಐಆರ್ನಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, 2012-13ನೇ ಸಾಲಿನಲ್ಲಿ ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಸೇರಿ 3,407 ಹುದ್ದೆಗಳಿಗೆ ಹಾಗೂ 2014-15ರಲ್ಲಿ 1,689 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ನೇಮಕಾತಿ ಸಂದರ್ಭದಲ್ಲಿ ಎಲ್ಲ ಪ್ರತಿಭಾವಂತರನ್ನು ಆಯ್ಕೆ ಮಾಡದೆ ಹೆಚ್ಚು ಅಂಕ ಪಡೆಯದ ಕೆಲವು ಅಭ್ಯರ್ಥಿಗಳಿಗೂ ಹುದ್ದೆ ಲಭಿಸಿದೆ. ಪರೀಕ್ಷೆ ಬರೆಯದವರಿಗೂ ನೇಮಕಾತಿ ಮಾಡಲಾಗಿದೆ ಎಂದು ಆರೋಪಿಸಿದರು.
2014-15ರ ಆಯ್ಕೆಗೆ ಸಂಬಂಧಿಸಿ 2017-18, 18-19ರ ನೇಮಕಾತಿ ಸಂದರ್ಭದಲ್ಲಿ ಮುಖ್ಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾಗದ ಹುದ್ದೆಗಳಿಗೆ ಆಯ್ಕೆ ಪಟ್ಟಿಯಲ್ಲಿ ಇಲ್ಲದವರನ್ನು ಆಯ್ಕೆ ಮಾಡಲಾಗಿದೆ. ಮೆರಿಟ್ ಲಿಸ್ಟ್ ಬಿಟ್ಟು ನಾನ್ ಮೆರಿಟ್ ಇರುವವರು, ಕನಿಷ್ಠ ಅಂಕಗಳನ್ನೂ ಪಡೆಯದವರಿಗೂ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಅವರು ದೂರಿದರು.
ಫೋರ್ಜರಿ ದಾಖಲೆ ಸಲ್ಲಿಸುವಿಕೆ, ಅಧಿಕಾರ ದುರ್ಬಳಕೆ, ಅಧಿಸೂಚನೆಯ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡುಬಂದಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ನೋಂದಣಿ ಸಂಖ್ಯೆಯನ್ನು ಬಳಸಿ ಭಾಗಶಃ ಹೋಲಿಕೆ ಆಗುವ ಮತ್ತು ಪರೀಕ್ಷೆಯನ್ನೇ ಬರೆಯದ ವ್ಯಕ್ತಿಗಳಿಗೆ ನೇಮಕಾತಿ ಪತ್ರ ಆದೇಶ ನೀಡಲಾಗಿದೆ. ಇಂಥ ಅಕ್ರಮಗಳಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದು ರವಿಕುಮಾರ್ ಹೇಳಿದರು.
ಕಾಂಗ್ರೆಸ್ ಮುಖಂಡರು 40 ಶೇಕಡಾ ಭ್ರಷ್ಟಾಚಾರ ಆರೋಪಕ್ಕೆ ದಾಖಲೆ ಬಿಡುಗಡೆಗೊಳಿಸಲಿ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಏಜೆಂಟ್ ಎಂದು ಅವರು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.







