ಮಂಗಳೂರು | ರಾಜಕಾಲುವೆಗಳಿಗೆ ಸಿಸಿಟಿವಿ ಕ್ಯಾಮರಾ ಕಣ್ಗಾವಲು!
23 ಕಡೆ ಮಳೆ ಮಾಪನ, 9 ಹವಾಮಾನ ಮಾಪನ

ಮಂಗಳೂರು, ಸೆ.16: ಅತಿವೃಷ್ಟಿ ಸಂದರ್ಭ ನಗರದಲ್ಲಿ ಸಂಭವಿಸುವ ಕೃತಕ ನೆರೆ, ರಾಜಕಾಲುವೆಗಳು ತುಂಬಿ ಹರಿಯುವ ಬಗ್ಗೆ ನಿಗಾ ಇಡುವ ನಿಟ್ಟಿನಲ್ಲಿ ಮಂಗಳೂರಿನ 20 ರಾಜಕಾಲುವೆಗಳಿಗಳಿಗೆ ಸಿಸಿಟಿವಿ ಕ್ಯಾಮರಾ (Cctv camera) ಅಳವಡಿಸಲಾಗಿದೆ. ಈ ಸಿಸಿಟಿವಿ ಕ್ಯಾಮರಾಗಳ ಜತೆ ಕಾಲುವೆಗಳ ನೀರಿನ ಮಟ್ಟ ತಿಳಿಸುವ ವಾಟರ್ ಲೆವೆಲ್ ಸೆನ್ಸರ್ (water level sensor) ಕೂಡಾ ಅಳವಡಿಸಲಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈಗಾಗಲೇ ಬೆಂಗಳೂರಿನಲ್ಲೂ ರಾಜಕಾಲುವೆಗಳಲ್ಲಿ ಈ ಸಿಸಿಟಿವಿ ಕ್ಯಾಮರಾ ಹಾಗೂ ವಾಟರ್ ಲೆವೆಲ್ ಸೆನ್ಸರ್‌ಗಳನ್ನು ಅಳವಡಿಸಿದ್ದು, ಮಂಗಳೂರಿನಲ್ಲಿಯೂ ಸದ್ದಿಲ್ಲದೆ ಈ ಯುನಿಟ್‌ಗಳ ಅಳವಡಿಕೆ ಕಾರ್ಯ ನಡೆದಿದೆ.
ಕೊಟ್ಟಾಪರ, ಪಂಪ್‌ವೆಲ್, ಜಪ್ಪಿನಮೊಗರು, ಸುಭಾಷ್ ನಗರ, ಅತ್ತಾವರ, ಕೊಡಿಯಾಲಬೈಲು, ಬಿಜೈ, ಕುದ್ರೋಳಿ, ಪಚ್ಚನಾಡಿ, ಕೋಡಿಕ್ಕಲ್, ಚಿತ್ರಾಪುರ, ಮಾಲೆಮಾರ್ ಸಹಿತ ಪಾಲಿಕೆ ವ್ಯಾಪ್ತಿಯ 20 ರಾಜಕಾಲುವೆಗಳ ಬದಿಯಲ್ಲಿ ಸೆನ್ಸರ್ ಅಳವಡಿಸಲಾಗಿದೆ. ಸಿಸಿಟಿವಿ ಕ್ಯಾಮರಾ ಸೆನ್ಸರ್ ಇದರಲ್ಲಿದ್ದು, ಸೋಲಾರ್ ಮೂಲಕ ಇದು ನಿರ್ವಹಣೆಯಾಗುತ್ತಿದೆ.
ಮಳೆಯ ಸಂದರ್ಭ ರಾಜಕಾಲುವೆಯಲ್ಲಿ ನೀರು ಯಾವ ಮಟ್ಟದಲ್ಲಿದೆ, ಅಪಾಯದ ಮಟ್ಟದ ಬಗ್ಗೆ ಮಾಹಿತಿಯನ್ನು ಪಡೆಯುವ ನಿಟ್ಟಿನಲ್ಲಿ ಈ ಸೆನ್ಸಾರ್ ಕಾರ್ಯನಿರ್ವಹಿಸಲಿದೆ. ಈ ಸಿಸಿಟಿವಿ ಕ್ಯಾಮರಾ ಹಾಗೂ ಸೆನ್ಸರ್‌ಗಳಿಂದ ಮಾಹಿತಿಯು ನೇರವಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪಾರಧಿಕಾರ ಕಚೇರಿಗೆ ತಲುಪಲಿದೆ.
ಇದೇ ವೇಳೆ ರಾಜಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ, ಅಬಕಾರಿ ಭವನ, ಮುಕ್ಕ ಚೆಕ್ ಪೋಸ್ಟ್, ಬಿಇಒ ಕಚೇರಿ ಬೋಆರ, ಸುರತ್ಕಲ್ ಪಶು ಆಸ್ಪತ್ರೆ ಸಹಿತ 23 ಪ್ರದೇಶಗಳಲ್ಲಿ ಮಳೆ ಮಾಪನ ಕೇಂದ್ರ ಟೆಲಿಮಿಟ್ರಿಕ್ ರೇನ್ ಗೇಜ್ (ಟಿಆರ್‌ಜಿ) ಅಳವಡಿಸಿದೆ. ಈ ಯಂತ್ರವು ಆ ಪ್ರದೇಶಗಳಲ್ಲಿ ಬೀಳುವ ಮಳೆಯ ಪ್ರಮಾಣದ ಮಾಹಿತಿ ನೀಡಲಿದೆ. ಇದರದೊಂದಿಗೆ ಸರ್ಕ್ಯೂಟ್ ಹೌಸ್, ಎಪಿಎಂಸಿ, ಬೈಕಂಪಾಡಿ, ಬಿಜೈ ಮೆಸ್ಕಾಂ ಭವನ ಸಹಿತ 9 ಕಡೆಗಳಲ್ಲಿ ಹವಾಮಾನ ಮಾಪನ ಕೇಂದ್ರ ಟೆಲಿಮೆಟ್ರಿಕ್ ವೆದರ್ ಸ್ಟೇಷನ್ ಅಳವಡಿಸಲಾಗಿದೆ. ಇದು ಆಯಾ ಪ್ರದೇಶದ ಹವಾಮಾನ, ಉಷ್ಣಾಂಶ, ಗಾಳಿಯ ವೇಗ ಮೊದಲಾದ ಮಾಹಿತಿಯನ್ನು ನೀಡಲಿದೆ. ಸದ್ಯ ನಗರದಲ್ಲಿ ಅಳವಡಿಸಲಾಗಿರುವ ಈ ಉಪಕರಣಗಳ ಮಾಹಿತಿಯು ಪ್ರಾಧಿಕಾರದ ಬೆಂಗಳೂರಿನ ಕೇಂದ್ರ ಕಚೇರಿಗೆ ರವಾನೆಯಾಗುತ್ತಿದೆ.







