ತೊಕ್ಕೊಟ್ಟು: ರಸ್ತೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ನಿತಿನ್
ಉಳ್ಳಾಲ: ಹೆದ್ದಾರಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ಗೆ ನಿಯಂತ್ರಣ ತಪ್ಪಿದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಮೀನು ಸಾಗಾಟದ ಕ್ಯಾಂಟರ್ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತೊಕ್ಕೊಟ್ಟು ಬೈಪಾಸ್ ಎಂಬಲ್ಲಿ ಶುಕ್ರವಾರ ನಡೆದಿದೆ.
ಕಾಸರಗೋಡು ಜಿಲ್ಲೆಯ, ಕುಂಬಳೆ ಉಲ್ಲೋಡಿ ನಿವಾಸಿ ನಿತಿನ್ ಮಾನ್ಯ (27) ಮೃತರು ಎಂದು ಗುರುತಿಸಲಾಗಿದೆ.
ಟೆಲ್ಕೊ ಸೋಲಾರ್ ಕಂಪನಿಯ ಕಾಸರಗೋಡು ಶಾಖೆಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಅವರು ಕೃಷ್ಣ ಪ್ರಸಾದ್ ಎಂಬವರ ಬೈಕಲ್ಲಿ ಮಂಗಳೂರಿಗೆ ಬಂದು ನಂತರ ಕಾಸರಗೋಡಿಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ತೊಕ್ಕೊಟ್ಟು ಸಮೀಪದ ಬೈಪಾಸ್ ಹೆದ್ದಾರಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ಗೆ ನಿತಿನ್ ಅವರ ಬೈಕ್ ಢಿಕ್ಕಿ ಹೊಡೆದಿದ್ದು, ಈ ವೇಳೆ ಮೀನು ಸಾಗಾಟದ ಕ್ಯಾಂಟರ್ ನಿತಿನ್ ತಲೆ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಂದೆ, ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.







