ಮಸೂದ್, ಫಾಝಿಲ್ ಕೊಲೆ ಪ್ರಕರಣಕ್ಕೆ ಸಿಗದ ನ್ಯಾಯ; ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆಯಿಂದ ಪ್ರತಿಭಟನೆ

ಮಂಗಳೂರು, ಸೆ.16: ಬೆಳ್ಳಾರೆಯ ಮಸೂದ್ ಮತ್ತು ಮಂಗಳಪೇಟೆಯ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ತಾರತಮ್ಯ ನೀತಿಯನ್ನು ಖಂಡಿಸಿ ಮತ್ತು ಸೂಕ್ತ ನ್ಯಾಯ ಕಲ್ಪಿಸುವಂತೆ ಆಗ್ರಹಿಸಿ ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆಯ ನೇತೃತ್ವದಲ್ಲಿ ಶುಕ್ರವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ಬೃಹತ್ ಸಂಖ್ಯೆಯಲ್ಲಿ ಕ್ಲಾಕ್ ಟವರ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರಕಾರದ ದ್ವಿಮುಖ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ ಸರಕಾರ ತನ್ನ ತಪ್ಪನ್ನು ತಿದ್ದಿಕೊಂಡು ಸಮಾನ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಬಳಿಕ ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆಯ ಮುಖಂಡರನ್ನು ಒಳಗೊಂಡ ನಿಯೋಗವು ದ.ಕ.ಜಿಲ್ಲಾಧಿಕಾರಿಯ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
"ಜಿಲ್ಲೆಯಲ್ಲಿ ಅರಾಜಕತೆ ಸೃಷ್ಟಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ನೇರ ಕಾರಣ. ಈ ಹಿಂದೆ ಮಂಗಳೂರಿಗೆ ಭೇಟಿ ನೀಡಿದ ವೇಳೆ ಅವರು ‘ಕ್ರಿಯೆಗೆ ಪ್ರತಿಕ್ರಿಯೆ ಸಹಜ’ ಎಂಬ ಬೇಜವಾಬ್ದಾರಿಯುತ ಹೇಳಿಕೆ ನೀಡಿ ಗಲಭೆಗೆ ಕಿಡಿ ಹಚ್ಚಿದ್ದಾರೆ. ಮುಸ್ಲಿಂ ಸಮುದಾಯದ ಮೇಲೆ ನಿರಂತರ ಗುರಿಯಾಗಿಸಲು ಸರಕಾರವೇ ಛೂ ಬಿಟ್ಟಿವೆ. ಈ ಹಿಂದೆ ಎನ್‌ಆರ್‌ಸಿ, ಸಿಎಎ ಪ್ರತಿಭಟನೆಯ ವೇಳೆ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾದರು. ಆದರೆ ಅವರಿಗೆ ನ್ಯಾಯ, ಪರಿಹಾರ ಸಿಗಲಿಲ್ಲ. ಇದೀಗ ಫಾಝಿಲ್ ಮತ್ತು ಮಸೂದ್‌ರ ಕೊಲೆಯಾಗಿದೆ. ರಾಜ್ಯ ಬಿಜೆಪಿ ಸರಕಾರ ಪರಿಹಾರ ನೀಡುವಲ್ಲಿ ಮತ್ತು ಪ್ರಕರಣವನ್ನು ತನಿಖಾ ಸಂಸ್ಥೆಗೆ ವಹಿಸುವಲ್ಲಿಯೂ ತಾರತಮ್ಯ ಎಸಗಿದೆ. ಮುಖ್ಯಮಂತ್ರಿಯ ಈ ಆಟ ಹೆಚ್ಚು ಕಾಲ ನಡೆಯುವುದಿಲ್ಲ. ಪ್ರಜೆಗಳನ್ನು ಸಮಾನವಾಗಿ ಕಾಣಲಾಗದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು".
-ಯಾಕೂಬ್ ಸಅದಿ ನಾವೂರು, ಎಸ್ಸೆಸ್ಸೆಫ್ ರಾಜ್ಯ ಮುಖಂಡರು
"ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮುಸ್ಲಿಮರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಈ ಅನ್ಯಾಯ, ದೌರ್ಜನ್ಯ, ತಾರತಮ್ಯವನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಅಧಿಕಾರಕ್ಕಾಗಿ ಸನಾತನ ಸಂಸ್ಕೃತಿಯನ್ನೇ ನಾಶ ಮಾಡುವುದನ್ನು ಕಂಡು ಇಲ್ಲಿನ ಸಜ್ಜನ ಹಿಂದೂಗಳು ಇನ್ನು ಸುಮ್ಮನಿರಲಾರರು. ಪ್ರವೀಣ್ ನೆಟ್ಟಾರ್ ಕೊಲೆಯಾದ ಬಳಿಕ ತಿರುಗಿ ಬೀಳತೊಡಗಿದ್ದಾರೆ. ಹಾಗಾಗಿ ನಾಡಿನ ಸರ್ವ ಪ್ರಜೆಗಳು ತಿರುಗಿ ಬೀಳುವ ಮುನ್ನ ಸರಕಾರ ರಾಜಧರ್ಮ ಪಾಲಿಸಬೇಕು".
-ಎಸ್.ಬಿ.ಮುಹಮ್ಮದ್ ದಾರಿಮಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯ ಮುಖಂಡರು
"ದೇಶಾದ್ಯಂತ ಮುಸ್ಲಿಮರಿಗೆ ನ್ಯಾಯ ಮರೀಚಿಕೆಯಾಗಿದೆ. ಆದಾಗ್ಯೂ ಹೋರಾಟ ಮುಂದುವರಿಯಲಿದೆ. ಮುಸ್ಲಿಮರನ್ನು ಯಾವತ್ತೂ ಕೂಡ ಬೆದರಿಸಿ ಸುಮ್ಮನಿರಿಸಲು ಸಾಧ್ಯವಿಲ್ಲ. ಪೊಲೀಸರು ಸಂವಿಧಾನವನ್ನು ರಕ್ಷಿಸಬೇಕೇ ವಿನಃ ಆಡಳಿತ ವರ್ಗದ ಹಿತ ಕಾಪಾಡಬಾರದು. ಫಾಝಿಲ್ ಹತ್ಯೆಯ ಆರೋಪಿಯೊಬ್ಬ ಜಾಮೀನು ಪಡೆದು ಹೊರಬರಲು ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದೆ".
ಎ.ಕೆ. ಅಶ್ರಫ್ ಜೋಕಟ್ಟೆ, ರಾಜ್ಯ ಕಾರ್ಯದರ್ಶಿ, ಪಿಎಫ್‌ಐ
"ಮನುಷ್ಯತ್ವ ಇಲ್ಲದವರು ಮಾತ್ರ ಕೊಲೆಕೃತ್ಯವನ್ನು ಸಂಭ್ರಮಿಸಬಹುದು. ಮತೀಯ ಗಲಭೆ, ಕೊಲೆಗಳ ಹಿಂದೆ ರಾಜಕಾರಣಿಗಳ ವೋಟು-ಸೀಟಿನ ಲೆಕ್ಕಾಚಾರವಿದೆ. ಫಾಝಿಲ್-ಮಸೂದ್ ಕೊಲೆ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತನ್ನ ಹೊಣೆಗಾರಿಕೆ ಮರೆತಿದ್ದಾರೆ. ಶಿಕ್ಷಣ, ಆರೋಗ್ಯವನ್ನು ಖಾಸಗೀಕರಣಗೊಳಿಸಿದ ಸರಕಾರವು ಇದೀಗ ‘ನ್ಯಾಯ’ವನ್ನೂ ಕೂಡ ಖಾಸಗೀಕರಣ ಮಾಡಲು ಹೊರಟಿರುವುದು ಖಂಡನೀಯ".
-ಮುಹಮ್ಮದ್ ಕುಂಞಿ, ರಾಜ್ಯ ಮುಖಂಡರು, ಜಮಾಅತೆ ಇಸ್ಲಾಮೀ ಹಿಂದ್
"ಫಾಝಿಲ್-ಮಸೂದ್ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ನಡೆಸಿದ ಈ ಹೋರಾಟ ಆರಂಭ ಮಾತ್ರ. ಈ ಪ್ರತಿಭಟನೆಯ ಬಳಿಕವೂ ನ್ಯಾಯ, ಪರಿಹಾರ ಸಿಗದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು".
- ಕೆ. ಅಶ್ರಫ್, ಅಧ್ಯಕ್ಷ, ಮುಸ್ಲಿಂ ಸಂಘಟನೆಗಳ ಒಕ್ಕೂಟ
"ಮಗನ ಕೊಲೆಯಾಗಿ 50 ದಿನಗಳಾಗಿವೆ. ಆದರೆ ಸರಕಾರದಿಂದ ನಮಗೆ ಸೂಕ್ತ ನ್ಯಾಯ ಸಿಗಲಿಲ್ಲ. ಎಲ್ಲದರಲ್ಲೂ ತಾರತಮ್ಯ ಎಸಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಮಂದಿ ಆರೋಪಿಗಳಿದ್ದು, ಅವರನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದರೂ ಬಂಧನವಾಗಿಲ್ಲ. ಅವರನ್ನು ಯಾವಾಗ ಬಂಧಿಸುವುದು? ಅವರು ಇನ್ನಷ್ಟು ಅಮಾಯಕರನ್ನು ಕೊಲೆ ಮಾಡಿದ ಬಳಿಕ ಬಂಧಿಸುವುದೇ?"
- ಉಮರ್ ಫಾರೂಕ್, ಕೊಲೆಯಾದ ಫಾಝಿಲ್‌ನ ತಂದೆ
ಅಬೂ ಸಮಾ ಕಿರಾಅತ್ ಪಠಿಸಿದರು. ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಅಶ್ರಫ್ ಬದ್ರಿಯಾ ಅಧ್ಯಕ್ಷತೆ ವಹಿಸಿದ್ದರು. ಕೊಲೆಯಾದ ಬೆಳ್ಳಾರೆ ಮಸೂದ್‌ರ ಸೋದರ ಮಾವ ಹೈದರ್ ಅಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ. ಶರೀಫ್ ಸ್ವಾಗತಿಸಿದರು. ಅಬ್ದುಸ್ಸಮದ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.






















