ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ವಿಶ್ವ ಹಸಿರು ಕಟ್ಟಡಗಳ ಸಪ್ತಾಹದ ವಿಶೇಷ ಕಾರ್ಯಕ್ರಮ

ಕುಂದಾಪುರ, ಸೆ.16: ಬ್ಯಾರೀಸ್ ಗ್ರೂಪ್ ಚೇಯರ್‌ಮ್ಯಾನ್ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರ ಆಶಯದಂತೆ ವಿಶ್ವ ಹಸಿರು ಕಟ್ಟಡಗಳ ಸಪ್ತಾಹ-2022 ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿದ್ದ ಎಫ್‌ಎಸ್‌ಎಲ್ ಇನ್ ಇಂಡಿಯಾ ವಿಶೇಷ ಪ್ರತಿನಿಧಿಯಾಗಿ ಕೋಡಿ ಕಡಲತೀರದ ಕಡಲಾಮೆಯ ಕುರಿತು ವಿಶೇಷ ಅಧ್ಯಯನಕ್ಕೆ ಇಟಲಿಯಿಂದ ಆಗಮಿಸಿರುವ ಎಲೆನೋರಾ ಮಾತನಾಡಿ, ಹಸಿರು ಕಟ್ಟಡಗಳ ನಿರ್ಮಾಣದಲ್ಲಿ ಬಳಸಲ್ಪಡುವ ತಾಂತ್ರಿಕತೆ ಮತ್ತು ಸಾಧನ- ಸಲಕರಣೆಗಳು ಇತರ ಸಾಮಾನ್ಯ ಕಟ್ಟಡಗಳಿಗಿಂತ ವಿಭಿನ್ನತೆ, ವಿಶಿಷ್ಟತೆಯಿಂದ ಕೂಡಿರುತ್ತದೆ. ಜಲಸಂರಕ್ಷಣೆ, ಹಸಿರು ಹಾಸು ಹಾಗೂ ವಿವಿಧ ಸೋಲಾರ್ ಸೌಲಭ್ಯಗಳೊಂದಿಗೆ ಹಸಿರು ಪರಿಸರದೊಂದಿಗೆ ನಿಸರ್ಗ ಸಹಜ ತಂಪು ವಾತಾವರಣದೊಂದಿಗೆ ಆನಂದದಾಯಕ, ಆರೋಗ್ಯದಾಯಕ ಜೀವನ ನಡೆಸಲು ಹಸಿರು ಕಟ್ಟಡಗಳ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಹಸಿರು ಕೋಡಿ ಕಡಲತೀರಕ್ಕೆ ಬ್ಯಾರೀಸ್ ಗ್ರೂಪ್ ನ ಹಸಿರು ಕಟ್ಟಡಗಳು ಸೊಬಗನ್ನು ತಂದಿದೆ ಎಂದರು.
ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವದಲ್ಲಿ ಎಲ್ಲರೂ ಪರಿಸರ ಸ್ನೇಹಿ ಹಸಿರು ಕಟ್ಟಡದಲ್ಲಿ ಜೀವನ ನಡೆಸಬೇಕಾಗಿದೆ. ಆಧುನಿಕ ಜಗತ್ತು ಇದನ್ನು ಪಡೆದು ಕೊಳ್ಳುತ್ತಿದೆ. ಬ್ಯಾರೀಸ್ ಗ್ರೂಪ್ ಹಸಿರು ಕಟ್ಟಡಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಡಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ.ಫಿರ್ದೋಸ್, ಬ್ಯಾರೀಸ್ ಗ್ರೂಪ್ ನಿಂದ ನಿರ್ಮಿಸಲ್ಪಟ್ಟ ಹಸಿರು ಕಟ್ಟಡಗಳು ಮತ್ತು ಸಾಧನಾ ಪ್ರಶಸ್ತಿಗಳ ಕುರಿತು ಪಿಪಿಟಿ ಪ್ರದರ್ಶನದ ಮೂಲಕ ಪರಿಚಯಿಸಿದರು. ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರಹ್ಮಾನ್ ಮಾತನಾಡಿ, ನಮ್ಮ ಬ್ಯಾರೀಸ್ ಗ್ರೂಪ್‌ನಿಂದ ಈಗಾಗಲೇ ಹಲವು ಹಸಿರು ಕಟ್ಟಡಗಳು ನಿರ್ಮಾಣವಾಗಿವೆ. ಇನ್ನೂ ಹೆಚ್ಚು ಇಂತಹ ಹಸಿರು ಕಟ್ಟಡಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾರೀಸ್ ಸಿ ಸೈಡ್ ಪಬ್ಲಿಕ್ ಸ್ಕೂಲ್ ಸಲಹಾ ಮಂಡಳಿ ಸಲಹೆಗಾರ ಅಬುಶೇಕ್, ಸಮೂಹ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪರಿಸರ ಕುರಿತ ವಿಶೇಷ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಿ.ಎಡ್ ಪ್ರಶಿಕ್ಷಣಾರ್ಥಿ ದೀಪಾ ಸ್ವಾಗತಿಸಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಕವಿತಾ ವಂದಿಸಿದರು.







