ಮುಂದಿನ ವರ್ಷ ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆ ವಿಶ್ವ ಬ್ಯಾಂಕ್ ವರದಿ

ವಾಷಿಂಗ್ಟನ್, ಸೆ.16: ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‍ಗಳು ಏಕಕಾಲದಲ್ಲಿ ಹಣಕಾಸು ನೀತಿಯನ್ನು ಬಿಗಿಗೊಳಿಸುತ್ತಿರುವಂತೆಯೇ ಮುಂದಿನ ವರ್ಷ ಪ್ರಪಂಚವು ಆರ್ಥಿಕ ಹಿಂಜರಿತವನ್ನು ಎದುರಿಸಬಹುದು ಎಂದು ವಿಶ್ವಬ್ಯಾಂಕ್ ಹೊಸ ವರದಿಯಲ್ಲಿ ಹೇಳಿದೆ.
ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹಣದುಬ್ಬರವನ್ನು ತಗ್ಗಿಸಲು ಪೂರೈಕೆಯ ಅಡಚಣೆಯನ್ನು ನಿವಾರಿಸುವಂತೆ ಗುರುವಾರ ಬಿಡುಗಡೆಗೊಂಡಿರುವ ವರದಿಯಲ್ಲಿ ಸಲಹೆ ನೀಡಲಾಗಿದೆ.
ಜಾಗತಿಕ ಆರ್ಥಿಕ ಹಿಂಜರಿತದ ಹಲವಾರು ಸೂಚಕಗಳು ಈಗಾಗಲೇ ಮಿನುಗುತ್ತಿವೆ. 1970ರ ಆರ್ಥಿಕ ಹಿಂಜರಿತದ ಬಳಿಕದ ಚೇತರಿಕೆಯ ನಂತರ ಜಾಗತಿಕ ಆರ್ಥಿಕತೆಯು ಕಡಿದಾದ ಇಳಿಜಾರಿನಲ್ಲಿ ಸಾಗುತ್ತಿದೆ. ಕೇಂದ್ರೀಯ ಬ್ಯಾಂಕ್‍ಗಳಿಂದ ಜಾಗತಿಕ ಬಡ್ಡಿದರ ಹೆಚ್ಚಳವು 4%ಕ್ಕೆ ತಲುಪಬಹುದು(2021ಕ್ಕೆ ಹೋಲಿಸಿದರೆ ದುಪ್ಪಟ್ಟು) ಮತ್ತು ಇದರಿಂದ ಹಣದುಬ್ಬರದ ಪ್ರಮಾಣ 5%ಕ್ಕೆ ಹೆಚ್ಚಬಹುದು ಎಂದು ವರದಿ ಹೇಳಿದೆ.
ಅಮೆರಿಕದಿಂದ ಯುರೋಪ್ ಮತ್ತು ಭಾರತದವರೆಗೆ ದೇಶಗಳು ಸಾಲದ ದರವನ್ನು ಆಕ್ರಮಣಕಾರಿಯಾಗಿ ಹೆಚ್ಚಿಸುತ್ತಿದ್ದು ಅಗ್ಗದ ಹಣದ ಪೂರೈಕೆಯನ್ನು ತಡೆಯುವ ಮತ್ತು ಆ ಮೂಲಕ ಹಣದುಬ್ಬರವನ್ನು ತಗ್ಗಿಸಲು ಸಹಾಯ ಮಾಡುವ ಉದ್ದೇಶ ಇದರ ಹಿಂದಿದೆ. ಆದರೆ ಅಂತಹ ವಿತ್ತೀಯ ಬಿಗಿಗೊಳಿಸುವಿಕೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗಬಹುದು. ಹೂಡಿಕೆಯನ್ನು ಕುಗ್ಗಿಸಿ, ಉದ್ಯೋಗ ನಷ್ಟ ಮತ್ತು ಬೆಳವಣಿಗೆಯನ್ನು ನಿಗ್ರಹಿಸಲಿದೆ. ಜಾಗತಿಕ ಬೆಳವಣಿಗೆಯು ತೀವ್ರಗತಿಯಲ್ಲಿ ನಿಧಾನವಾಗುತ್ತಿದೆ, ಹೆಚ್ಚಿನ ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕುವುದರಿಂದ ಮತ್ತಷ್ಟು ನಿಧಾನವಾಗುವ ಸಾಧ್ಯತೆಯಿದೆ. ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿನ ಜನರಿಗೆ ವಿನಾಶಕಾರಿಯಾದ ದೀರ್ಘಕಾಲೀನ ಪರಿಣಾಮಗಳೊಂದಿಗೆ ಈ ಪ್ರವೃತ್ತಿಗಳು ಮುಂದುವರಿಯುತ್ತವೆ ಎಂಬುದು ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್‍ಪಾಸ್ ಹೇಳಿದ್ದಾರೆ. ನೀತಿ ನಿರೂಪಕರು(ಪಾಲಿಸಿ ಮೇಕರ್ಸ್) ಬಳಕೆಯನ್ನು ಕಡಿಮೆ ಮಾಡುವುದರ ಬದಲು ಉತ್ಪಾದನೆಯನ್ನು ಹೆಚ್ಚಿಸುವತ್ತ ತಮ್ಮ ಗಮನವನ್ನು ಬದಲಾಯಿಸಬಹುದು ಎಂದು ಮಲ್‍ಪಾಸ್ ಹೇಳಿದ್ದಾರೆ. ಕೇವಲ ಬಡ್ಡಿದರವನ್ನು ಹೆಚ್ಚಿಸುವುದು ಸರಬರಾಜು ನಿರ್ಬಂಧಗಳಿಂದ ಹೊರಹೊಮ್ಮುವ ಹಣದುಬ್ಬರವನ್ನು ನಿಯಂತ್ರಿಸಲು ಸಾಲದು. ದೇಶಗಳು ಸರಕುಗಳ ಲಭ್ಯತೆಯತ್ತ ಹೆಚ್ಚಿನ ಗಮನ ಹರಿಸಬೇಕು. ಜಾಗತಿಕ ಆರ್ಥಿಕ ಹಿಂಜರಿತವನ್ನು ಪ್ರಚೋದಿಸದೆಯೇ ಹಣದುಬ್ಬರವನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಕೇಂದ್ರೀಯ ಬ್ಯಾಂಕ್‍ಗಳು ಮುಂದುವರಿಸಬೇಕು ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.
ದಾಖಲೆ ಮಟ್ಟದ ಹಣದುಬ್ಬರ
ಉಕ್ರೇನ್ ಯುದ್ಧವು ಆಹಾರ ಸರಬರಾಜನ್ನು ಮೊಟಕುಗೊಳಿಸಿರುವುದು, ಕೊರೋನ ಸಾಂಕ್ರಾಮಿಕದ ಕಾರಣ ಪೂರೈಕೆ ಸರಪಳಿಯ ಮೇಲೆ ಮಾರಕ ಆಘಾತ, ನಿರಂತರ ಲಾಕ್‍ಡೌನ್ ಘೋಷಣೆಯಿಂದಾಗಿ ಚೀನಾದಲ್ಲಿ ಬೇಡಿಕೆ ಕನಿಷ್ಟ ಮಟ್ಟಕ್ಕೆ ಇಳಿದಿರುವುದು , ಹವಾಮಾನ ವೈಪರೀತ್ಯ ಸೇರಿದಂತೆ ಕೃಷ್ಯುತ್ಪನ್ನಗಳ ಮೇಲೆ ಹಲವು ಅಂಶಗಳ ಪ್ರಭಾವವು ಜಾಗತಿಕ ಹಣದುಬ್ಬರವನ್ನು ದಾಖಲೆ ಮಟ್ಟಕ್ಕೆ ಏರಿಸಿದೆ ಎಂದು ವರದಿ ಉಲ್ಲೇಖಿಸಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಆಹಾರ ಬೆಲೆ ಗಗನಕ್ಕೇರಿದ ಹಿನ್ನಲೆಯಲ್ಲಿ 2022ರ ಆಗಸ್ಟ್‍ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು 7%ಕ್ಕೆ ಏರಿಕೆಯಾಗಿದೆ.







