ರಶ್ಯ-ಚೀನಾ ಸಂಬಂಧದಿಂದ ಅಂತರಾಷ್ಟ್ರೀಯ ಶಾಂತಿಗೆ ಹಾನಿ: ತೈವಾನ್

ತೈಪೆ, ಸೆ.16: ರಶ್ಯಾ- ಚೀನಾ ನಡುವಿನ ಸಂಬಂಧವು ಅಂತರಾಷ್ಟ್ರೀಯ ಶಾಂತಿಗೆ ಬೆದರಿಕೆಯಾಗಿದ್ದು ಅಂತರಾಷ್ಟ್ರೀಯ ಸಮುದಾಯವು ಸರ್ವಾಧಿಕಾರದ ವಿಸ್ತರಣೆಯನ್ನು ತಡೆಯಬೇಕು ಎಂದು ತೈವಾನ್ ಶುಕ್ರವಾರ ಹೇಳಿದೆ.
ಚೀನಾದ ಕಮ್ಯುನಿಸ್ಟ್ ಪಕ್ಷದ ಸರ್ವಾಧಿಕಾರಿ, ವಿಸ್ತರಣಾವಾದಿ ಸರಕಾರವನ್ನು ಅನುಸರಿಸಿ ನಮ್ಮ ದೇಶದ ಸಾರ್ವಭೌಮತ್ವವನ್ನು ಕೀಳಾಗಿಸುವ ರೀತಿಯಲ್ಲಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವ ರಶ್ಯದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತೈವಾನ್‍ನ ವಿದೇಶಾಂಗ ಸಚಿವಾಲಯ ಹೇಳಿದೆ. ಶಾಂತಿ ಮತ್ತು ಯಥಾಸ್ಥಿತಿಯನ್ನು ಕಾಪಾಡುವವರನ್ನು ರಶ್ಯ ಪ್ರಚೋದನಕಾರಿಗಳು ಎಂದು ಕರೆಯುತ್ತಿದೆ. ಇದು ಅಂತರಾಷ್ಟ್ರೀಯ ಶಾಂತಿ, ಸ್ಥಿರತೆ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಮೇಲೆ ಚೀನಾ ಮತ್ತು ರಶ್ಯದ ಸರ್ವಾಧಿಕಾರಿ ಆಡಳಿತಗಳ ಮೈತ್ರಿಯಿಂದ ಉಂಟಾದ ಹಾನಿಯನ್ನು ತೋರಿಸುತ್ತದೆ ಎಂದು ತೈವಾನ್ ಹೇಳಿದೆ.
ಗುರುವಾರ ಉಜ್ಬೇಕಿಸ್ತಾನದ ಸಮರ್‍ಕಂಡ್‍ನಲ್ಲಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್‍ರನ್ನು ಭೇಟಿಯಾಗಿದ್ದರು. ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ (ಫೆಬ್ರವರಿ 24) ಉಭಯ ಮುಖಂಡರ ನಡುವಿನ ಪ್ರಪ್ರಥಮ ಮುಖಾಮುಖಿ ಭೇಟಿ ಇದಾಗಿದೆ. ವಿಶ್ವದ ಬಲಿಷ್ಟಶಕ್ತಿಗಳ ಪಾತ್ರವನ್ನು ನಿರ್ವಹಿಸಲು ರಶ್ಯದ ಜತೆ ಸೇರಿ ಪ್ರಯತ್ನಿಸುವುದಾಗಿ ಈ ಸಂದರ್ಭ ಜಿಂಪಿಂಗ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪುಟಿನ್, ಸ್ವಯಂ ಆಡಳಿತ ವ್ಯವಸ್ಥೆಯಿರುವ ತೈವಾನ್ ಮೇಲಿನ ಚೀನಾದ ಹಕ್ಕು ಪ್ರತಿಪಾದನೆಗೆ ರಶ್ಯದ ಬೆಂಬಲವಿದೆ ಎಂದಿದ್ದರು. ಇಬ್ಬರು ಸರ್ವಾಧಿಕಾರಿಗಳ ನಡುವಿನ ಭೇಟಿಯು ತೈವಾನ್‍ನ ಆತಂಕವನ್ನು ಹೆಚ್ಚಿಸಿದೆ.