ಲಂಡನ್: ಪೊಲೀಸ್ ಅಧಿಕಾರಿಗಳಿಗೆ ಚೂರಿ ಇರಿತ
ಲಂಡನ್, ಸೆ.16: ಮಧ್ಯ ಲಂಡನ್‍ನಲ್ಲಿ ಶುಕ್ರವಾರ ಬೆಳಿಗ್ಗೆ ವ್ಯಕ್ತಿಯೊಬ್ಬ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಚೂರಿಯಿಂದ ಇರಿದಿದ್ದು ಗಾಯಗೊಂಡ ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆದರೆ ಇದು ಭಯೋತ್ಪಾದಕ ಕೃತ್ಯವಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸೆಪ್ಟಂಬರ್ 19ರಂದು ನಡೆಯುವ ಬ್ರಿಟನ್ ರಾಣಿ ಎಲಿಝಬೆತ್ ಅವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಾಗತಿಕ ಮುಖಂಡರು ಆಗಮಿಸುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಭದ್ರತೆಯನ್ನು ಬಿಗಿಗೊಳಿಸುತ್ತಿರುವ ಮಧ್ಯೆಯೇ ಈ ಘಟನೆ ನಡೆದಿದೆ.
ಲಿಸೆಸ್ಟರ್ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಇಬ್ಬರು ಅಧಿಕಾರಿಗಳ ಮೇಲೆ ಚೂರಿಯಿಂದ ದಾಳಿ ನಡೆಸಿ ಗಾಯಗೊಳಿಸಿದ ಪ್ರಕರಣದ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ. ಈ ಸಂದರ್ಭ ಆರೋಪಿಗೂ ಗಾಯವಾಗಿದ್ದು ಆತನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೆಟ್ರೊಪಾಲಿಟನ್ ಪೊಲೀಸರು ಹೇಳಿದ್ದಾರೆ.
ಘಟನೆಯನ್ನು ಖಂಡಿಸಿರುವ ಲಂಡನ್ ಮೇಯರ್ ಸಾದಿಖ್ ಖಾನ್, ಇದೊಂದು ಭಯಾನಕ ಘಟನೆ. ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಈ ಧೀರ ಅಧಿಕಾರಿಗಳಿಗೆ ನಾವೆಲ್ಲಾ ಕೃತಜ್ಞರಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.