ಮಾಹೆಯಿಂದ ರೀ-ಪೆನ್ ಯೋಜನೆಗೆ ಚಾಲನೆ

ಉಡುಪಿ, ಸೆ.16: ಏಕ ಬಳಕೆಯ ಪೆನ್ನುಗಳ (ಯೂಸ್ ಎಂಡ್ ಥ್ರೋ) ಬಳಕೆಯನ್ನು ನಿಲ್ಲಿಸುವ ಹಾಗೂ ರಿಫಿಲ್ ವ್ಯವಸ್ಥೆಯ ಪೆನ್ನುಗಳ ಬಳಕೆಯನ್ನು ಉತ್ತೇಜಿಸುವ ‘ರೀ-ಪೆನ್’ ಯೋಜನೆಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಕುಲಪತಿ ಲೆ.ಜ. ಡಾ. ಎಂ.ಡಿ.ವೆಂಕಟೇಶ್ ಇಲ್ಲಿ ಚಾಲನೆ ನೀಡಿದರು.
ಮಾಹೆಯ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸ್‌ನ ಇಕೋ ಕ್ಲಬ್, ಶ್ಯಾಮ್ ಜುವೆಲ್ಸ್ ಪುತ್ತೂರು ಪ್ರೈ.ಲಿ.ನ ಸಿಎಸ್‌ಆರ್ ನಿಧಿಯ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ ಡೆಂಟಲ್ ಕಾಲೇಜಿನ ಸಹ ಡೀನ್ ಹಾಗೂ ಕಾಲೇಜಿನ ಇಕೋ ಕ್ಲಬ್‌ನ ಸಲಹೆಗಾರರಾದ ಡಾ.ಎಂ.ವಿದ್ಯಾ ಸರಸ್ವತಿ, ನಾವು ಪೆನ್ನುಗಳ ಮರುಬಳಕೆಯ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಅದಕ್ಕೆ ಪ್ರೋತ್ಸಾಹಿಸಬೇಕು. ಇದರಿಂದ ಇಂಗಾಲದ ಅವಶೇಷ ಗಳನ್ನು ಕಡಿಮೆಗೊಳಿಸಲು ಸಹಾಯ ಮಾಡಿದಂತಾಗುತ್ತದೆ. ಖಾಲಿ ಫ್ಲಾಸ್ಟಿಕ್ ರಿಫಿಲ್ಲ್‌ಗಳನ್ನು ಕರಕುಶಲ ವಸ್ತುಗಳ ತಯಾರಿಯಲ್ಲಿ ಬಳಸಬಹುದಾಗಿದೆ ಎಂದರು.
ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಮಾತನಾಡಿ, ಪುನರ್ ಬಳಕೆಯ ಉತ್ತಮ ಗುಣಮಟ್ಟ ಪೆನ್ನು ಗಳನ್ನು ಬಳಸುವುದರಿಂದ ಏಕಬಳಕೆಯ ಮಿಲಿಯಗಟ್ಟಲೆ ಪೆನ್ನುಗಳನ್ನು ಬಳಸಿ ಎಸೆಯುವುದರಿಂದ ಉತ್ಪಾದನೆ ಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಬಹುದು ಎಂದರು.
ಪೆನ್ನುಗಳನ್ನು ರಿಫಿಲ್ಲ್‌ಗಳ ಜೊತೆ ಖರೀದಿಸಲು ಹಾಗೂ ಮರು ಬಳಕೆ ಮಾಡ ಬಹುದಾದ ಪೆನ್ನುಗಳನ್ನು ಹೆಚ್ಚು ಜನಪ್ರಿಯಗೊಳಿಸಲು ವಿದ್ಯಾರ್ಥಿಗಳು ಹಾಗೂ ಸಂಸ್ಥೆಗಳ ಖರೀದಿದಾರರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ವಾಗಿದೆ ಎಂದು ಮಾಹೆಯ ಸಿಓಓ ಸಿ.ಜಿ.ಮುತ್ತಣ್ಣ ಅಭಿಪ್ರಾಯಪಟ್ಟರು.
ಮಾಹೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಪಿ.ಕರ್, ಕಾರ್ಪೋರೇಟ್ ಸಂಬಂಧಗಳ ನಿರ್ದೇಶಕ ಡಾ.ರವಿರಾಜ್ ಎನ್.ಎಸ್. ಉಪಸ್ಥಿತರಿದ್ದರು.







