ತ್ಯಾಜ್ಯಗಳನ್ನು ಸೂಕ್ತವಾಗಿ ನಿರ್ವಹಿಸದ್ದಕ್ಕೆ ರಾಜಸ್ಥಾನ ಸರಕಾರಕ್ಕೆ 3,000 ಕೋ.ರೂ. ದಂಡ
ಜಲ ಮಾಲಿನ್ಯ ನಿಯಂತ್ರಣದಲ್ಲಿ ವೈಫಲ್ಯ: ಉತ್ತರ ಪ್ರದೇಶಕ್ಕೆ 120 ಕೋ.ರೂ.ದಂಡ

photo : PTI
ಹೊಸದಿಲ್ಲಿ,ಸೆ.16: ಘನ ಮತ್ತು ದ್ರವ ತ್ಯಾಜ್ಯಗಳನ್ನು ಸೂಕ್ತವಾಗಿ ನಿರ್ವಹಿಸದೆ ಪರಿಸರಕ್ಕೆ ಹಾನಿಯನ್ನುಂಟು ಮಾಡಿದ್ದಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿ ಟಿ)ಯು ರಾಜಸ್ಥಾನ ಸರಕಾರಕ್ಕೆ 3,000 ಕೋ.ರೂ.ಗಳ ದಂಡವನ್ನು ವಿಧಿಸಿದೆ.
ಪರಿಸರಕ್ಕೆ ನಿರಂತರ ಹಾನಿಯನ್ನು ತಡೆಯಲು ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗಾಗಿ ನಿಯಮಗಳ ಅನುಷ್ಠಾನದ ಮೇಲೆ ನಿಗಾಯಿರಿಸುವ ಹೊಣೆಗಾರಿಕೆಯನ್ನು ಹಸಿರು ನ್ಯಾಯಮಂಡಳಿಗೆ ವಹಿಸಿರುವ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಎನ್ ಜಿ ಟಿ ಕಾಯ್ದೆಯ ಕಲಂ 15ರಡಿ ದಂಡ ವಿಧಿಸುವುದು ಅಗತ್ಯವಾಗಿದೆ ಎಂದು ನ್ಯಾ.ಆದರ್ಶಕುಮಾರ ಗೋಯೆಲ್ ಅವರ ಪೀಠವು ಹೇಳಿದೆ.
ಜಲ ಮಾಲಿನ್ಯ ನಿಯಂತ್ರಣದಲ್ಲಿ ವೈಫಲ್ಯ: ಉತ್ತರ ಪ್ರದೇಶ ಸರಕಾರಕ್ಕೂ 120 ಕೋ.ರೂ.ದಂಡ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿ ಟಿ)ಯು ದ್ರವ ಮತ್ತು ಘನ ತ್ಯಾಜ್ಯದ ಅಸಮರ್ಪಕ ನಿರ್ವಹಣೆಗಾಗಿ ಪರಿಸರ ಪರಿಹಾರವಾಗಿ ಉತ್ತರ ಪ್ರದೇಶ ಸರಕಾರಕ್ಕೆ 120 ಕೋ.ರೂ.ಗಳ ದಂಡವನ್ನು ವಿಧಿಸಿದೆ.
ಗೋರಖ್ಪುರದಲ್ಲಿಯ ಮತ್ತು ಸುತ್ತುಮುತ್ತಲಿನ ಚರಂಡಿಗಳು, ನದಿಗಳು ಮತ್ತು ಇತರ ಜಲಮೂಲಗಳಲ್ಲಿ ಪ್ರತಿದಿನ ಕನಿಷ್ಠ 55 ಮಿಲಿಯನ್ ಲೀಟರ್ಗಳಷ್ಟು ಸಂಸ್ಕರಿಸದ ಕೊಳಚೆ ನೀರನ್ನು ವಿಸರ್ಜಿಸುತ್ತಿರುವುದಕ್ಕೆ ರಾಜ್ಯ ಸರಕಾರವು ಹೊಣೆಯಾಗಿದೆ ಎಂದು ನ್ಯಾ.ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಪೀಠವು ಗುರುವಾರ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಎತ್ತಿ ಹಿಡಿಯಿತು.
ಗೋರಖ್ಪುರ ಜಿಲ್ಲೆಯಲ್ಲಿ ಮತ್ತು ಸುತ್ತಮುತ್ತಲು ಸಂಸ್ಕರಿಸದ ಕೊಳಚೆ ನೀರು ಮತ್ತು ಕೈಗಾರಿಕಾ ತ್ಯಾಜ್ಯಗಳಿಂದ ಜಲಮೂಲಗಳು ಮತ್ತು ಅಂತರ್ಜಲ ಮಾಲಿನ್ಯದ ವಿರುದ್ಧ ಕ್ರಮವನ್ನು ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಮಾ.30ರಂದು ನಡೆದಿದ್ದ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಜಲಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳ ಗಂಭೀರ ವೈಫಲ್ಯವನ್ನು ನ್ಯಾಯಮಂಡಳಿಯು ಗಮನಕ್ಕೆ ತೆಗೆದುಕೊಂಡಿತ್ತು.
ನ್ಯಾ.ಸುಧೀರ್ ಅಗರವಾಲ್ ಮತ್ತು ತಜ್ಞ ಸದಸ್ಯರಾದ ಎ.ಸೆಂಥಿಲ್ ವೇಲು ಮತ್ತು ಅಫ್ರೋಝ್ ಅಹ್ಮದ್ ಅವರನ್ನೂ ಒಳಗೊಂಡಿದ್ದ ಎನ್ಜಿಟಿ ಪೀಠವು ಗುರುವಾರ ಉ.ಪ್ರ.ಸರಕಾರಕ್ಕೆ ಪ್ರತಿ ದಿನ ನದಿಗಳಲ್ಲಿ ವಿಸರ್ಜಿಸಲಾಗುತ್ತಿರುವ ಪ್ರತಿ ಮಿಲಿಯನ್ ಲೀ.ಕೊಳಚೆ ನೀರಿಗೆ ಎರಡು ಕೋ.ರೂ.ಗಳ ದಂಡವನ್ನು ವಿಧಿಸಿದ್ದು,ಇದರ ಒಟ್ಟು ಮೊತ್ತ 110 ಕೋ.ರೂ.ಗಳಾಗಿವೆ. ಘನತ್ಯಾಜ್ಯ ಸಂಸ್ಕರಣೆಯಲ್ಲಿ ವೈಫಲ್ಯಕ್ಕಾಗಿ ಪ್ರತ್ಯೇಕವಾಗಿ 10 ಕೋ.ರೂ.ದಂಡವನ್ನು ವಿಧಿಸಲಾಗಿದೆ.







