ಬದುಕಿನ ಮಹತ್ವ ಅರಿತರೆ ಆತ್ಮಹತ್ಯೆಯಿಂದ ದೂರ: ಡಾ. ಕುಮಾರ್

ಮಂಗಳೂರು, ಸೆ.16: ಬದುಕಿನ ಮಹತ್ವವನ್ನು ಅರಿತುಕೊಂಡು ದುಶ್ಚಟಗಳು ಹಾಗೂ ಋಣಾತ್ಮಕ ಚಿಂತನೆ ಗಳಿಂದ ದೂರವಾದರೆ ಆತ್ಮಹತ್ಯೆಯಂತಹ ದುಷ್ಕೃತ್ಯಗಳನ್ನು ತಡೆಗಟ್ಟಬಹುದಾಗಿದೆ ಎಂದು ದ.ಕ.ಜಿಪಂ ಸಿಇಒ ಡಾ.ಕುಮಾರ್ ಅಭಿಪ್ರಾಯಪಟ್ಟರು.
ದ.ಕ.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಶ್ರಿ ಮಂಜುನಾಥೇಶ್ವರ ಬ್ಯುಸಿನೆಸ್ ಮ್ಯಾನೆಜ್‌ಮೆಂಟ್ ವಿಭಾಗದ ಕಾನ್ಫರೆನ್ಸ್ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾ ಗಿದ್ದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವಿಂದು ಆತ್ಮಹತ್ಯೆ ತಡೆ ದಿನವನ್ನು ಆಚರಿಸುತ್ತಿರುವುದೇ ವಿಪರ್ಯಾಸ. ಒಂದು ಕಡೆ ಆಧುನಿಕತೆಗೆ ಒಗ್ಗಿಕೊಂಡು ಅಭಿವೃದ್ಧಿಯತ್ತ ನಾಗಾಲೋಟದಿಂದ ಓಡುತ್ತಿದ್ದೇವೆ. ಇನ್ನೊಂದೆಡೆ ಮಾನಸಿಕ ಸದೃಢತೆಯಲ್ಲಿ ಹಿಂದೆ ಜಾರುತ್ತಿದ್ದೇವೆ. ಕೆಟ್ಟದಾರಿ ಹಾಗೂ ದುಷ್ಟರ ಸಂಗವನ್ನು ಆಯ್ಕೆ ಮಾಡುವ ಮುನ್ನ ಚಿಂತಿಸಬೇಕು. ಜತೆಗೆ ಕ್ಷಣಿಕ ಸುಖದ ಆಸೆ, ಆಕಾಂಕ್ಷೆಗಳನ್ನು ತಿರಸ್ಕರಿಸಿ ಗುರಿಯೆಡೆಗೆ ಮುನ್ನಡೆಯಬೇಕು. ಆತ್ಮಹತ್ಯೆಯಿಂದ ನಮ್ಮ ಅವಲಂಭಿತರು ಅತಂತ್ರವಾಗುತ್ತಾರೆಯೇ ಹೊರತು ಮತ್ತೇನೂ ಬದಲಾಗುವುದಿಲ್ಲ. ಕ್ಷುಲ್ಲಕ ಕಾರಣಗಳಿಗೆ ಅಮೂಲ್ಯವಾದ ಜೀವನವನ್ನು ಬಲಿಕೊಡಬಾರದು ಎಂದು ವಿದ್ಯಾರ್ಥಿಗಳಿಗೆ ಡಾ. ಕುಮಾರ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಡಾ.ಕಿಶೋರ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಅರುಣಾ ಪಿ. ಕಾಮತ್, ಸಂಪನ್ಮೂಲ ವ್ಯಕ್ತಿ ಅರುಣಾ ಎಡಿಯಾಲ್, ಕಾರ್ಯಕ್ರಮ ಅನುಷ್ಠಾನಾಧಿ ಕಾರಿ ಡಾ.ಸುದರ್ಶನ್, ತಾಲೂಕು ಆರೋಗ್ಯಾಧಿಕಾರಿ ಡಾ.ಚಿರಾಗ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಮನೋರೋಗತಜ್ಞೆ ಡಾ.ಶಿಲ್ಪಾ, ಡಾ.ಸುಪ್ರಿತಾ, ಉಪಸ್ಥಿತರಿದ್ದರು.







