ಚೀನಿ ಲೋನ್ ಆ್ಯಪ್ ಪ್ರಕರಣ:ಪೇಟಿಎಂ ಸೇರಿದಂತೆ ಪಾವತಿ ಆ್ಯಪ್‌ಗಳಿಗೆ ಈ.ಡಿ.ದಾಳಿ,46.67 ಕೋ.ರೂ.ಜಪ್ತಿ

ಹೊಸದಿಲ್ಲಿ,ಸೆ.16: ಜಾರಿ ನಿರ್ದೇಶನಾಲಯ (ಈ.ಡಿ.)ವು ಚೀನಿ ಲೋನ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆಗಳನ್ನು ನಡೆಸಿದ ಬಳಿಕ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಪೇಟಿಎಂ,ಈಸ್‌ಬಝ್,ರೇಝರ್‌ಪೇ ಮತ್ತು ಕ್ಯಾಷ್‌ಫ್ರೀ ಪೇಮೆಂಟ್ ಗೇಟ್‌ವೇಗಳಲ್ಲಿ ಇರಿಸಲಾಗಿದ್ದ 46.77 ಕೋ.ರೂ.ಗಳನ್ನು ಸ್ತಂಭನಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ.ಡಿ.ಸೆ.14ರಂದು ದಿಲ್ಲಿ,ಉತ್ತರ ಪ್ರದೇಶದ ಗಾಝಿಯಾಬಾದ್ ಮತ್ತು ಲಕ್ನೋ,ಮುಂಬೈ ಹಾಗೂ ಬಿಹಾರದ ಗಯಾದಲ್ಲಿಯ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.
ಆ್ಯಪ್ ಆಧಾರಿತ ಸಾಲ ನೀಡಿಕೆಯ ಎಚ್‌ಪಿಝಡ್ ಟೋಕನ್ ಮತ್ತು ಸಂಬಂಧಿತ ಘಟಕಗಳ ವಿರುದ್ಧ ಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ,ಗುರ್ಗಾಂವ್,ಮುಂಬೈ, ಪುಣೆ,ಚೆನ್ನೈ,ಹೈದರಾಬಾದ್,ಜೈಪುರ,ಜೋಧಪುರ ಮತ್ತು ಬೆಂಗಳೂರಿನಲ್ಲಿಯ ಪೇಟಿಎಂ,ಈಸ್‌ಬಝ್,ರೇಝರ್‌ಪೇ ಹಾಗೂ ಕ್ಯಾಷ್‌ಫ್ರೀಗೆ ಸೇರಿದ ಇತರ 16 ಕಚೇರಿಗಳಲ್ಲಿಯೂ ಅಧಿಕಾರಿಗಳು ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದರು.
ಶೋಧ ಕಾರ್ಯಾಚರಣೆಗಳ ಸಂದರ್ಭ ಪೇಮೆಂಟ್ ಗೇಟ್‌ವೇಗಳಲ್ಲಿಯ ಆರೋಪಿ ಸಂಸ್ಥೆಗಳ ವರ್ಚುವಲ್ ಖಾತೆಗಳಲ್ಲಿ ಭಾರೀ ಪ್ರಮಾಣದ ಹಣವನ್ನು ಈ.ಡಿ.ಪತ್ತೆ ಹಚ್ಚಿದೆ.
ಈಸ್‌ಬಝ್ (ಪುಣೆ) ಬಳಿ 33.36 ಕೋ.ರೂ.,ರೇಝರ್‌ಪೇ (ಬೆಂಗಳೂರು) ಬಳಿ 8.21 ಕೋ.ರೂ.,ಕ್ಯಾಷ್‌ಫ್ರೀ (ಬೆಂಗಳೂರು) ಬಳಿ 1.28 ಕೋ.ರೂ. ಹಾಗೂ ಪೇಟಿಎಂ (ದಿಲ್ಲಿ) ಬಳಿ 1.11 ಕೋ.ರೂ.ಗಳು ಪತ್ತೆಯಾಗಿವೆ. ವಿವಿಧ ಬಾ ್ಯಂಕ್ ಖಾತೆಗಳು ಮತ್ತು ವರ್ಚುವಲ್ ಖಾತೆಗಳಲ್ಲಿ ಒಟ್ಟು 46.67 ಕೋ.ರೂ.ಗಳನ್ನು ಪತ್ತೆ ಹಚ್ಚಿ ಸ್ತಂಭನಗೊಳಿಸಲಾಗಿದೆ ಎಂದು ಈ.ಡಿ.ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ವರ್ಷ ನಾಗಾಲ್ಯಾಂಡ್ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ನ ಆಧಾರದಲ್ಲಿ ಈ.ಡಿ.ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ನಡೆಸುತ್ತಿದೆ.
ಎಚ್‌ಪಿಝಡ್ ಟೋಕನ್ ಅನ್ನು ಲಿಲಿಯನ್ ಟೆಕ್ನೋಕ್ಯಾಬ್ ಪ್ರೈ.ಲಿ.ಮತ್ತು ಶಿಗೂ ಟೆಕ್ನಾಲಜಿ ಪ್ರೈ.ಲಿ.ನಿರ್ವಹಿಸುತ್ತಿದ್ದವು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶಿಗೂ ಟೆಕ್ನಾಲಜಿ ವಿವಿಧ ಚೀನಿ ನಿಯಂತ್ರಿತ ಕಂಪನಿಗಳೊಂದಿಗೂ ನಂಟು ಹೊಂದಿದೆ. ವಿವಿಧ ಆ್ಯಪ್‌ಗಳ ನಿರ್ವಹಣೆ,ಗೇಮಿಂಗ್‌ಗಾಗಿ ವೆಬ್‌ಸೈಟ್‌ಗಳು,ಸಾಲ ಮತ್ತು ಇತರ ನೆಪಗಳಲ್ಲಿ ವಿವಿಧ ಇತರ ಕಂಪನಿಗಳು ಸಾರ್ವಜನಿಕರಿಂದ ಹಣ ಸ್ವೀಕರಿಸುತ್ತಿದ್ದವು ಎನ್ನುವುದೂ ಬಹಿರಂಗಗೊಂಡಿದೆ ಎಂದು ಈ.ಡಿ.ಹೇಳಿಕೆಯಲ್ಲಿ ತಿಳಿಸಿದೆ.
ಈ ವಂಚನೆಗಳಲ್ಲಿ ಭಾಗಿಯಾಗಿರುವ ವಿವಿಧ ಕಂಪನಿಗಳ ಹಿಂದೆ ಗುರುಗ್ರಾಮದ ಜಿಲಾನ್ ಕನ್ಸಲ್ಟಂಟ್ಸ್ ಇಂಡಿಯಾ ಪ್ರೈ.ಲಿ.ನ ಪಾತ್ರವನ್ನು ಈ.ಡಿ.ಶಂಕಿಸಿದೆ.
Xಮ್ಯಾಡ್ ಎಲಿಫಂಟ್ ನೆಟ್‌ವರ್ಕ್ ಟೆಕ್ನಾಲಜಿ ಪ್ರೈ.ಲಿ.ಎಂಬ ಇಂತಹ ಸಂಸ್ಥೆಯೊಂದು 10 ಫೈನಾನ್ಶಿಯಲ್ ಲಿ.ಜೊತೆ ಒಪ್ಪಂದ ಮಾಡಿಕೊಂಡು ಯೋ-ಯೋ ಕ್ಯಾಷ್,ತುಫಾನ್ ರುಪೀಸ್ ಮತ್ತು ಕೋಕೋ ಕ್ಯಾಷ್‌ನಂತಹ ವಿವಿಧ ಸಾಲ ಆ್ಯಪ್‌ಗಳನ್ನು ನಿರ್ವಹಿಸುತ್ತಿತ್ತು. ಇದೇ ರೀತಿ ಸು ಹುಯಿ ಟೆಕ್ನಾಲಜಿ ಪ್ರೈ.ಲಿ. ನಿಮಿಷಾ ಫೈನಾನ್ಸ್ ಇಂಡಿಯಾ ಪ್ರೈ.ಲಿ.ಜೊತೆ ಒಪ್ಪಂದದ ಮೇರೆಗೆ ಲೋನ್ ಆ್ಯಪ್‌ಗಳನ್ನು ಕಾರ್ಯಾಚರಿಸುತ್ತಿತ್ತು ಎಂದು ಈ.ಡಿ.ತಿಳಿಸಿದೆ.







