ಸಿಯುಇಟಿ-ಯುಜಿ ಫಲಿತಾಂಶ ಘೋಷಣೆ: ವಿವಿಗಳಿಂದ ಸ್ವಂತ ಮೆರಿಟ್ ಪಟ್ಟಿಗಳ ರಚನೆ

photo : PTI
ಹೊಸದಿಲ್ಲಿ,ಸೆ.16: ಪದವಿ ತರಗತಿಗಳಿಗೆ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (ಸಿಯುಇಟಿ-ಯುಜಿ)ಯ ಚೊಚ್ಚಲ ಆವೃತ್ತಿಯ ಫಲಿತಾಂಶಗಳನ್ನು ಶುಕ್ರವಾರ ಘೋಷಿಸಲಾಗಿದೆ. ಗುರುವಾರ ರಾತ್ರಿ 10 ಗಂಟೆಗೆ ಸಿಯುಇಟಿ-ಯುಜಿ ಫಲಿತಾಂಶಗಳ ಘೋಷಣೆ ನಿಗದಿಯಾಗಿತ್ತು. ಆದರೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ)ಯು ಬೃಹತ್ ಡಾಟಾಬೇಸ್ ಅನ್ನು ಉಲ್ಲೇಖಿಸಿ ಫಲಿತಾಂಶ ಪ್ರಕಟಣೆ ವಿಳಂಬವಾಗಲಿದೆ ಎಂದು ಮಧ್ಯರಾತ್ರಿಯ ಬಳಿಕ ತಿಳಿಸಿತ್ತು.
ವಿವಿಗಳ ಸಹಭಾಗಿತ್ವದೊಂದಿಗೆ ಮೆರಿಟ್ ಲಿಸ್ಟ್ಗಳನ್ನು ಸಿದ್ಧಪಡಿಸಲಾಗುವುದು. ಅವು ಸಿಯುಇಟಿ-ಯುಜಿ ಅಂಕಪಟ್ಟಿಯ ಆಧಾರದಲ್ಲಿ ತಮ್ಮ ವೈಯಕ್ತಿಕ ಕೌನ್ಸೆಲಿಂಗ್ನ್ನು ನಿರ್ಧರಿಸಲಿವೆ ಎಂದು ಎನ್ಟಿಎದ ಹಿರಿಯ ನಿರ್ದೇಶಕಿ (ಪರೀಕ್ಷೆಗಳು) ಸಾಧನಾ ಪರಾಶರ ತಿಳಿಸಿದರು.
ಎಲ್ಲ ಕೇಂದ್ರೀಯ ವಿವಿಗಳಲ್ಲಿ ಪದವಿ ತರಗತಿಗಳಿಗೆ ಹೆಬ್ಬಾಗಿಲಾಗಿರುವ ಚೊಚ್ಚಲ ಸಿಯುಇಟಿ-ಯುಜಿ ಜುಲೈನಲ್ಲಿ ಆರಂಭಗೊಂಡು ಆ.30ಕ್ಕೆ ಅಂತ್ಯಗೊಂಡಿತ್ತು. ಪರೀಕ್ಷೆಗಳಲ್ಲಿ ಶೇ.60ರಷ್ಟು ಹಾಜರಾತಿ ದಾಖಲಾಗಿತ್ತು.
ಆರಂಭಿಕ ಯೋಜನೆಯಂತೆ ಸಿಯುಇಟಿ-ಯುಜಿ ಆ.20ಕ್ಕೆ ಮುಗಿಯಬೇಕಿತ್ತು. ಆದರೆ ಹಲವಾರು ತೊಂದರೆಗಳಿಂದಾಗಿ ಪರೀಕ್ಷೆ ಮರುನಿಗದಿಗೊಂಡ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸಿಯುಇಟಿ-ಯುಜಿ ಅನ್ನು ಮುಂದೂಡಲಾಗಿತ್ತು ಮತ್ತು ಆರು ಹಂತಗಳಲ್ಲಿ ವಿಭಜಿಸಲಾಗಿತ್ತು.
ತಾಂತ್ರಿಕ ದೋಷಗಳು,ಪರೀಕ್ಷಾ ಕೇಂದ್ರಗಳ ಕೊನೆಯ ಘಳಿಗೆಯ ಬದಲಾವಣೆಗಳು,ಮಾಹಿತಿ ನೀಡದೇ ಪರೀಕ್ಷಾ ದಿನಾಂಕಗಳಲ್ಲಿ ಬದಲಾವಣೆ ಮತ್ತು ಹಿಂದಿನ ದಿನಾಂಕಗಳನ್ನು ಉಲ್ಲೇಖಿಸಿದ್ದ ಪ್ರವೇಶ ಪತ್ರಗಳು ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎದುರಿಸಿದ್ದ ಕೆಲವು ಸಮಸ್ಯೆಗಳಾಗಿದ್ದವು.
‘ವಿಧ್ವಂಸಕ ’ಕೃತ್ಯಗಳ ವರದಿಯ ಹಿನ್ನೆಲೆಯಲ್ಲಿ ಹಲವಾರು ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಅಧ್ಯಕ್ಷ ಎ.ಜಗದೀಶ ಕುಮಾರ ಅವರು ಈ ಹಿಂದೆ ತಿಳಿಸಿದ್ದರು.
14.9 ಲ.ವಿದ್ಯಾರ್ಥಿಗಳ ನೋಂದಣಿಯೊಂದಿಗೆ ಜೆಇಇ-ಮೇನ್ಸ್ನ ಸರಾಸರಿ ಒಂಭತ್ತು ಲ.ನೋಂದಣಿಯನ್ನು ಹಿಂದಿಕ್ಕಿರುವ ಸಿಯುಇಟಿ-ಯುಜಿ ಈಗ ದೇಶದ ಎರಡನೇ ಅತ್ಯಂತ ದೊಡ್ಡ ಪ್ರವೇಶ ಪರೀಕ್ಷೆಯಾಗಿದೆ. ಸರಾಸರಿ 18 ಲ.ಅಭ್ಯರ್ಥಿಗಳೊಂದಿಗೆ ನೀಟ್-ಯುಜಿ ದೇಶದಲ್ಲಿಯ ಅತ್ಯಂತ ದೊಡ್ಡ ಪರೀಕ್ಷೆಯಾಗಿದೆ.







