ಕ್ರಿಯಾ ಯೋಜನೆಗೆ ತಡೆ: ವಿಧಾನಸಭೆಯಲ್ಲಿ ಕಾಂಗ್ರಸ್ ಶಾಸಕ ಭೀಮಾ ನಾಯ್ಕ್ ಧರಣಿ

ಬೆಂಗಳೂರು, ಸೆ. 16: ‘ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾದ ಕ್ರಿಯಾ ಯೋಜನೆಗೆ ಸಚಿವರ ಆಪ್ತ ಕಾರ್ಯದರ್ಶಿ ತಡೆ ಹಿಡಿದಿದ್ದಾರೆ' ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯ ಭೀಮಾ ನಾಯ್ಕ್, ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗ ನಡೆಯಿತು.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ನೀಡಿದ ಉತ್ತರಕ್ಕೆ ತೃಪ್ತರಾಗದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕ್ರಿಯಾ ಯೋಜನೆ ಪತ್ರಕ್ಕೆ ತಡೆಹಿಡಿದಿದ್ದಾರೆ ಎಂದರೆ ಶಾಸಕರ ಹಕ್ಕಿಗೆ ಬೆಲೆ ಇಲ್ಲವೆ?. ಇದನ್ನು ಕೂಡಲೇ ಸರಿಪಡಿಸಬೇಕು' ಎಂದು ಆಗ್ರಹಿಸಿದರು.
‘ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆಯ ಸಿಎಂ ನಗರೋತ್ಥಾನ ಯೋಜನೆಯಡಿ 8 ಕೋಟಿ ರೂ. ಕ್ರಿಯಾ ಯೋಜನೆ ಕಳುಹಿಸಲಾಗಿತ್ತು. ಆದರೆ, ಈ ಕ್ರಿಯಾ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ತಡೆ ಹಿಡಿದಿದ್ದಾರೆ. 224 ಕ್ಷೇತ್ರಗಳಿಗೂ ಈ ರೀತಿ ಮಾಡಿದ್ದೀರಾ. ನಮಗೆ ನೀವೇ ನ್ಯಾಯ ಕೊಡಿಸಬೇಕು' ಎಂದು ಸ್ಪೀಕರ್‍ಗೆ ಸದಸ್ಯ ಭೀಮಾ ನಾಯ್ಕ್ ಮನವಿ ಮಾಡಿದರು.
ಬಳಿಕ ಪ್ರತಿಕ್ರಿಯಿಸಿದ ಸಚಿವ ಎಂಟಬಿ ನಾಗರಾಜ್, ‘ಹಗರಿ ಬೊಮ್ಮನಹಳ್ಳಿಯ ಪುರಸಭೆಯ ಎಲ್ಲ್ಲ ವಾರ್ಡ್‍ಗಳಿಗೆ ಸಮರ್ಪಕವಾಗಿ ಅನುದಾನ ಹಂಚಿಕೆ ಮಾಡಿಲ್ಲ ಎಂಬ ಆರೋಪಗಳಿವೆ. ಆ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದೆ. ಒಂದೊಂದು ವಾರ್ಡ್‍ಗೆ ಒಂದೊಂದು ರೀತಿ ಮಾಡಲು ಬರುವುದಿಲ್ಲ. ಒಂದು ವೇಳೆ ಇದರಲ್ಲಿ ಲೋಪ ದೋಷಗಳಿದ್ದರೆ ನನ್ನ ಗಮನಕ್ಕೆ ತನ್ನಿ' ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಭೀಮಾ ನಾಯ್ಕ್, ‘ಇದು ಶಾಸಕರ ಹಕ್ಕು ಚ್ಯುತಿಯಾಗಿರುವ ಪ್ರಶ್ನೆ. ಎಲ್ಲ್ಲ ಕ್ಷೇತ್ರಗಳಿಗೂ ಇದೇ ರೀತಿ ಮಾಡಿದ್ದರೆ ನಾನು ಮಾತನಾಡುತ್ತಿರಲಿಲ್ಲ. ಇಂದು ನನಗಾಗಿರಬಹುದು. ನಾಳೆ ಇಡೀ ಸದನಕ್ಕೂ ಅನ್ವಯಿಸುತ್ತದೆ' ಎಂದು ದೂರಿದರು. ‘ಈ ಸಮಸ್ಯೆಯನ್ನು ಸಚಿವರ ಜೊತೆ ಕೂತು ಬಗೆಹರಿಸಿಕೊಳ್ಳಿ' ಎಂದು ಸ್ಪೀಕರ್ ಸಲಹೆ ನೀಡಿದರು. ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಎಂಟಿಬಿ ಭರವಸೆ ನೀಡಿದರು. ಆಗ ಆರ್.ವಿ. ದೇಶಪಾಂಡೆ, ಝಮೀರ್ ಅಹ್ಮದ್, ವೆಂಕಟರಮಣಪ್ಪ, ಧರಣಿ ಕೈಬಿಡುವಂತೆ ಕೋರಿದ್ದರಿಂದ ಭೀಮಾನಾಯ್ಕ್ ಧರಣಿಯನ್ನು ಕೈಬಿಟ್ಟು ತಮ್ಮ ಸ್ಥಾನಕ್ಕೆ ಮರಳಿದರು.







