ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ಉಡುಪು ಸಂಹಿತೆಯ ಜಾರಿಗೆ ಕೋರಿದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಸೆ.16: ನೋಂದಾಯಿತ ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಗೆ ಸಮಾನ ಉಡುಪು ಸಂಹಿತೆಯನ್ನು ಜಾರಿಗೊಳಿಸುವಂತೆ ಕೇಂದ್ರ,ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನವನ್ನು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ವಿಚಾರಣೆಗೆ ಸ್ವೀಕರಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ.
ಇದು ನ್ಯಾಯನಿರ್ಣಯಕ್ಕಾಗಿ ನ್ಯಾಯಾಲಯಕ್ಕೆ ಬರಬೇಕಾದ ವಿಷಯವಲ್ಲ ಎಂದು ನ್ಯಾಯಮೂರ್ತಿಗಳಾದ ಹೇಮಂತ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ತಿಳಿಸಿತು.
ಸಮಾನತೆಯನ್ನು ಕಾಯ್ದುಕೊಳ್ಳಲು ಹಾಗೂ ಭ್ರಾತೃತ್ವ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ಉತ್ತೇಜಿಸಲು ಉಡುಪು ಸಂಹಿತೆಯನ್ನು ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ಪಿಐಎಲ್ ವಾದಿಸಿತ್ತು.
ಇದು ಸಾಂವಿಧಾನಿಕ ವಿಷಯವಾಗಿದೆ ಎಂದು ಹೇಳಿದ ಅರ್ಜಿದಾರರಾದ ನಿಖಿಲ್ ಉಪಾಧ್ಯಾಯ ಪರ ಹಿರಿಯ ವಕೀಲ ಗೌರವ ಭಾಟಿಯಾ ಅವರು,ಶಿಕ್ಷಣ ಹಕ್ಕು ಕಾಯ್ದೆಯಡಿ ನಿರ್ದೇಶನವನ್ನು ಕೋರಿದರು.
ಪಿಐಎಲ್‌ನ್ನು ಸ್ವೀಕರಿಸಲು ಪೀಠವು ಒಲವು ಹೊಂದಿಲ್ಲ ಎನ್ನುವುದನ್ನು ಗ್ರಹಿಸಿದ ಅವರು ಅದನ್ನು ಹಿಂದೆಗೆದುಕೊಂಡರು.
ಕರ್ನಾಟಕದ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಈ ಪಿಐಎಲ್ ಸಲ್ಲಿಕೆಯಾಗಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ರಾಜ್ಯ ಸರಕಾರವು ನಿಷೇಧಿಸಿದ್ದನ್ನು ಎತ್ತಿ ಹಿಡಿದಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೇಮಂತ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವೇ ನಡೆಸುತ್ತಿದೆ.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ,ಸಮಾಜವಾದ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ವೌಲ್ಯಗಳನ್ನು ಮೈಗೂಡಿಸಲು ಹಾಗೂ ಭ್ರಾತೃತ್ವ,ಘನತೆ,ಏಕತೆ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ಉತ್ತೇಜಿಸಲು ಕ್ರಮಗಳನ್ನು ಸೂಚಿಸಲು ನ್ಯಾಯಾಂಗ ಆಯೋಗ ಅಥವಾ ತಜ್ಞರ ಸಮಿತಿಯನ್ನು ರಚಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆಯೂ ಪಿಐಎಲ್‌ನಲ್ಲಿ ಕೋರಲಾಗಿತ್ತು.
ಶಿಕ್ಷಣ ಸಂಸ್ಥೆಗಳು ಜಾತ್ಯತೀತ ಸಾರ್ವಜನಿಕ ಸ್ಥಳಗಳಾಗಿದ್ದು,ಜ್ಞಾನ ಮತ್ತು ಬುದ್ಧಿವಂತಿಕೆ,ಉದ್ಯೋಗ,ಉತ್ತಮ ಆರೋಗ್ಯ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಲು ಇವೆ. ಅಗತ್ಯ ಮತ್ತು ಅನಗತ್ಯ ಧಾರ್ಮಿಕ ಪದ್ಧತಿಗಳ ಆಚರಣೆಗಾಗಿ ಅಲ್ಲ ಎಂದು ಪಿಐಎಲ್‌ನಲ್ಲಿ ಹೇಳಲಾಗಿತ್ತು.







