ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಬದ್ಧ, ಸಿಎಂ ಜೊತೆ ಚರ್ಚಿಸಿ ನಿರ್ಧಾರ: ಸಚಿವ ಶ್ರೀರಾಮುಲು

ಬೆಂಗಳೂರು, ಸೆ.16: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತಮಗೆ ಖುದ್ದಾಗಿ ತಿಳಿಸಿದ್ದಾರೆ. ಹೀಗಾಗಿ, ಈ ಸಮಸ್ಯೆಯ ಕುರಿತಂತೆ ಸಿಎಂ ಅವರೊಂದಿಗೆ ಚರ್ಚಿಸಿ ನಂತರ ಇತ್ಯರ್ಥಪಡಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಸಾರಿಗೆ ನೌಕರರು ವೇತನ ಪರಿಷ್ಕರಣೆ ಮಾಡಬೇಕೆಂದು ಆಗ್ರಹಿಸಿ 2020-21ರಲ್ಲಿ ಪ್ರತಿಭಟನೆ ಮಾಡಿದ್ದರು. ಆ ಸಂದರ್ಭದಲ್ಲಿ ಈ ಕುರಿತಂತೆ ಪರಿಶೀಲನೆ ಮಾಡಲಾಗುವುದು ಎಂಬ ಭರವಸೆಯನ್ನು ನೀಡಲಾಗಿತ್ತು. ಸದ್ಯ ಈ ಸಮಸ್ಯೆಯನ್ನು ಸಿಎಂ ಅವರೊಂದಿಗೆ ಚರ್ಚಿಸಿ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಪ್ರತಿನಿತ್ಯ 4 ಸಾರಿಗೆ ನಿಗಮಗಳಿಂದ 15 ಕೋಟಿ ರೂ.ಮೊತ್ತದ ಡೀಸೆಲ್ ಬಳಕೆಯಾಗುತ್ತಿದೆ. 90 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಬಸ್ ಟಿಕೆಟ್‍ನ ಪ್ರಯಾಣ ದರ ಹೆಚ್ಚಳ ಮಾಡಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಮಾಡಲಾಗಿಲ್ಲ. ಡೀಸೆಲ್ ದರ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗಳನ್ನು ಸಾರಿಗೆ ನಿಗಮಗಳು ಎದುರಿಸುತ್ತಿದ್ದರೂ ನೌಕರರ ವೇತನ ಪರಿಷ್ಕರಣೆಗೆ ಸರಕಾರ ಬದ್ಧವಾಗಿದೆ ಎಂದು ಹೇಳಿದರು.
ಕೊರೋನ ಸೇರಿದಂತೆ ಇನ್ನಿತರ ಕಾರಣಗಳಿಂದ ಸಾರಿಗೆ ನಿಗಮಗಳು ನಷ್ಟ ಅನುಭವಿಸಿದವು. ಇದಕ್ಕಾಗಿ ಸರಕಾರ 4 ನಿಗಮಗಳಿಗೆ ಸರಿಸುಮಾರು 12 ಸಾವಿರ ಕೋಟಿ ರೂ.ಗಳನ್ನು ನೀಡಿದೆ. ಹಾಗೂ ರಾಜ್ಯದ ಸಾರಿಗೆ ನಿಗಮಗಳನ್ನು ಲಾಭದಾಯಕವಾಗಿ ಕೊಂಡೊಯ್ಯಲು ಹಾಗೂ ಸಂಪನ್ಮೂಲ ಕ್ರೋಡೀಕರಣಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ನೀಡಿದ್ದು, ಅದರ ಪರಿಶೀಲನೆ ಹಂತದಲ್ಲಿದೆ ಎಂದು ಹೇಳಿದರು.
ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ 2020-21 ಸಾಲಿನವರೆಗೆ ಹಾಗೂ 2021- 22ನೆ ಸಾಲಿನಲ್ಲಿ ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆ ಮೊತ್ತಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದರು.
ಎಲ್‍ಇಡಿ ದೀಪ ಅಳವಡಿಕೆ: 703 ಪ್ರಕರಣ ದಾಖಲು
ಎಲ್‍ಇಡಿ ದೀಪಗಳನ್ನು ಉಪಯೋಗಿಸಿ ನಿಯಮ ಉಲ್ಲಂಘಿಸಿದ ವಾಹನ ಚಾಲಕ-ಸವಾರರ ವಿರುದ್ಧ ಮೋಟಾರ್ ವಾಹನ ಕಾಯ್ದೆ ಕಲಂ 177ರಡಿಯಲ್ಲಿ ಪೊಲೀಸ್ ಇಲಾಖೆಯು 2021ರಲ್ಲಿ 1492 ಪ್ರಕರಣ ಹಾಗೂ 2022ರ ಆಗಸ್ಟ್‍ವರೆಗೆ 703 ಪ್ರಕರಣಗಳನ್ನು ದಾಖಲಿಸಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಅವರು ವಿಧಾನ ಪರಿಷತ್‍ನಲ್ಲಿ ತಿಳಿಸಿದ್ದಾರೆ.







