ತುಮಕೂರು | ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ತುಮಕೂರು, ಸೆ.16: ಪತಿಯು ಆನಾರೋಗ್ಯದಿಂದ ಮೃತಪಟ್ಟ ನಂತರ, ನಮ್ಮನ್ನು ದಲಿತರೆಂದು ಮನೆಗೆ ಸೇರಿಸುತ್ತಿಲ್ಲ ಎಂದು ಅಂತರ್‌ಜಾತಿಯ ವಿವಾಹವಾಗಿದ್ದಮಂಜುಳಾ ಎಂಬ ಮಹಿಳೆ, ಪುಟ್ಟ ಮಗುವಿನೊಂದಿಗೆ ಧರಣಿ ನಡೆಸುತ್ತಿರುವ ಘಟನೆ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಪುರಂ ಬಡಾವಣೆಯ ಭೋವಿ ಜನಾಂಗಕ್ಕೆ ಸೇರಿದ ಮಂಜುಳಾ ಮತ್ತು ತುಮಕೂರಿನ ವಿದ್ಯಾನಗರದಲ್ಲಿ ವಾಸವಾಗಿರುವ ಒಕ್ಕಲಿಗ ಜನಾಂಗಕ್ಕೆ ಸೇರಿದ ಜಿತೇಂದ್ರ ಅವರು ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇವರಿಗೆ ಒಂದು ಹೆಣ್ಣು ಮಗುವಿದೆ. ಗಂಡ, ಹೆಂಡತಿ ಇಬ್ಬರು ಬೆಂಗಳೂರಿನ ಮಹಾಲಕ್ಷ್ಮೀಪುರಂನಲ್ಲಿಯೇ ಬಾಡಿಗೆ ಮನೆ ಪಡೆದು ವಾಸ ಮಾಡುತ್ತಿದ್ದರು. ಆಗಾಗ್ಗೆ ತುಮಕೂರಿಗೂ ಬಂದು ಹೋಗುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕಾಣೆಯಾಗಿದ್ದ ವ್ಯಕ್ತಿ ಪತ್ತೆ
ಧರಣಿಯಲ್ಲಿ ಮಂಜುಳಾ ಮಾತನಾಡಿ, ಇತ್ತೀಚೆಗೆ ಜಿತೇಂದ್ರ ಅವರು ಜಾಂಡಿಸ್ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ಅತ್ತೆ ಮತ್ತು ಅವರ ಐದು ಮಂದಿ ಹೆಣ್ಣು ಮಕ್ಕಳು ಮತ್ತು ಅವರ ಪತಿಯಂದಿರು ಮಗನ ಸಾವಿಗೆ ಸೊಸೆ ನೀಡಿದ ಸ್ಲೋಪಾಯಿಸ್ಸನ್ ಕಾರಣ ಎಂದು ಪೊಲೀಸರಿಗೆ ದೂರು ನೀಡಿ, ಐಪಿಸಿ ಕಲಂ 302ರ ಅನ್ವಯ ಕೊಲೆ ಕೇಸು ದಾಖಲಿಸಿದ್ದಾರೆ ಎಂದು ಮಂಜುಳಾ ದೂರಿದರು.
ದಲಿತ ಸಮುದಾಯಕ್ಕೆ ಸೇರಿದ ಸೊಸೆಗೆ ಆಸ್ತಿಯಲ್ಲಿ ಪಾಲು ನೀಡಬೇಕಾಗುತ್ತದೆ ಎಂಬ ಒಂದೇ ಒಂದು ಕಾರಣದಿಂದ ಮೃತ ಜಿತೇಂದ್ರದ ತಾಯಿ ಮತ್ತು ಸಹೋದರಿಯರು, ನನ್ನ ಗಂಡನ ಹೆಸರಿನಲ್ಲಿರುವ ತುಮಕೂರು ವಿದ್ಯಾನಗರದ ಮನೆಗೆ ಅಕ್ರಮವಾಗಿ ಸೇರಿಕೊಂಡಿದ್ದಾರೆ. ನಾನು ಮನೆಯೊಳಗೆ ಹೋಗಲು ಬಿಡುತ್ತಿಲ್ಲ ಎಂದು ಆರೋಪಿಸಿದರು.







