ಉಕ್ರೇನ್ ಯುದ್ಧ ಶೀಘ್ರದಲ್ಲೇ ಅಂತ್ಯಕ್ಕೆ ಯತ್ನ: ರಶ್ಯ ಅಧ್ಯಕ್ಷ ಪುಟಿನ್
ಯುದ್ದ ಕೊನೆಗೊಳಿಸಲು ರಶ್ಯಕ್ಕೆ ಪ್ರಧಾನಿ ಮೋದಿ ಕರೆ

photo : pti
ಸಮರ್ಖಂಡ್,ಸೆ.16: ಉಜ್ಭೇಕಿಸ್ತಾನದ ಸಮರ್ಖಂಡ್ನಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯ ನೇಪಥ್ಯದಲ್ಲಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಜೊತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿಯವರು ಉಕ್ರೇನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸುವಂತೆ ರಶ್ಯಕ್ಕೆ ಕರೆ ನೀಡಿದರು. ಯುದ್ದದ ಕಾಲ ಇದಲ್ಲವೆಂದು ಮೋದಿ ಹೇಳಿದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಉಕ್ರೇನ್ ಮೇಲೆ ರಶ್ಯ ದಾಳಿ ನಡೆಸಿದ ಬಳಿಕ ಪ್ರಧಾನಿ ಮೋದಿ ಹಾಗೂ ಪುಟಿನ್ ಅವರು ಮುಖಾಮುಖಿಯಾಗಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಇದೇ ಮೊದಲ ಸಲವಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಪುಟಿನ್ ಅವರು ಉಕ್ರೇನ್ ಜೊತೆಗಿನ ಯುದ್ದವನ್ನು ಕೊನೆಗೊಳಿಸಲು ಸಾಧ್ಯವಾದಷ್ಟು ಬೇಗನೇ ಕೊನೆಗೊಳಿಸಲು ತಾನು ಬಯಸಿರುವುದಾಗಿ ಹೇಳಿದರು. ಉಕ್ರೇನ್-ರಶ್ಯ ಯುದ್ಧದ ಕುರಿತ ಭಾರತವು ಆತಂಕ ಹೊಂದಿರುವುದರ ಆರಿವು ತನಗಿದೆ ಎಂದು ಪುಟಿನ್ ಪ್ರಧಾನಿ ಮೋದಿ ಅವರಿಗೆ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
‘‘ಉಕ್ರೇನ್ನಲ್ಲಿ ಸಂಘರ್ಷದ ಬಗ್ಗೆ ನಿಮ್ಮ ನಿಲುವು ಹಾಗೂ ಆತಂಕಗಳೇನೆಂಬುದು ನಮಗೆ ತಿಳಿದಿದೆ. ಈ ಯುದ್ಧವನ್ನು ಸಾಧ್ಯವಿದ್ದಷ್ಟು ಬೇಗನೇ ಕೊನೆಗೊಳಿಸಲು ಎಲ್ಲಾ ಪ್ರಯತ್ನಗಳನ್ನು ನಾವು ಮಾಡಲಿದ್ದೇವೆ’’ ಎಂದು ಪುಟಿನ್ ಅವರು ಪ್ರಧಾನಿ ಮೋದಿಯವರಿಗೆ ಹೇಳಿದ್ದಾರೆಂದು ವರದಿ ತಿಳಿಸಿದೆ.
‘‘ದುರದೃಷ್ಟವಶಾತ್ ಉಕ್ರೇನ್ ನಾಯಕತ್ವವು ಮಾತುಕತೆಯ ಪ್ರಕ್ರಿಯೆಯನ್ನು ತಿರಸ್ಕರಿಸಿದೆ ಹಾಗೂ ಮಿಲಿಟರಿ ಮೂಲಕ ತನ್ನ ಉದ್ದೇಶಗಳನ್ನು ಸಾಧಿಸಲು ಅದು ಬಯಸಿದೆ’’ ಎಂದು ಪುಟಿನ್ ತಿಳಿಸಿದರು.