ಭೋಪಾಲ್ ಲೈಂಗಿಕ ದೌರ್ಜನ್ಯ ಪ್ರಕರಣ : ಸಾಕ್ಷ್ಯ ನಾಶದ ಆರೋಪದಲ್ಲಿ ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಭೋಪಾಲ, ಸೆ. 16: ಶಾಲಾ ಬಸ್ನ ಚಾಲಕ ಸೆ. 8ರಂದು ಮೂರು ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶ ಮಾಡಿದ ಆರೋಪದಲ್ಲಿ ಭೋಪಾಲದ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶಾಲೆಯ ಅಧ್ಯಕ್ಷ ನಜ್ಮಾ ಜಮಾಲ್, ಕಾರ್ಯಚರಣೆ ನಿರ್ದೇಶಕ ಫೈಝಲ್ ಅಲಿ, ಪ್ರಾಂಶುಪಾಲ ಆಶಿಶ್ ಅಗರ್ವಾಲ್ ಹಾಗೂ ಸಾರಿಗೆ ಮ್ಯಾನೇಜರ್ ಸಯ್ಯದ್ ಬಿಲಾಲ್ ಅವರ ವಿರುದ್ಧ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಉಪ ಆಯುಕ್ತ ಶ್ರುತಿಕೀರ್ತಿ ಸೋಮವಂಶಿ ಅವರು ತಿಳಿಸಿದ್ದಾರೆ.
ಚಾಲಕ ಹನುಮಂತ ಜಾತವ್ ಹಾಗೂ ಸಹಾಯಕಿ ಊರ್ಮಿಳಾ ಸಾಹು ಅವರನ್ನು ಸೆಪ್ಟಂಬರ್ 13ರಂದು ಬಂಧಿಸಲಾಗಿದ್ದು, ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.
ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ಜಾತವ್ ಆಕೆ ಧರಿಸಿದ್ದ ಸಮವಸ್ತ್ರ ತೆಗೆದು ಬ್ಯಾಗ್ನಲ್ಲಿದ್ದ ಇನ್ನೊಂದು ಸಮವಸ್ತ್ರವನ್ನು ಹಾಕಿಸಿದ್ದ. ಇನ್ನೊಂದು ಸಮವಸ್ತ್ರವನ್ನು ಹಾಕಿಕೊಂಡು ಬಂದ ಪುತ್ರಿಯ ಬಗ್ಗೆ ತಾಯಿಗೆ ಸಂಶಯ ಉಂಟಾಯಿತು. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯನ್ನು ವಿಚಾರಿಸಿದಾಗ, ಅವರು ಬಾಲಕಿಯ ಸಮವಸ್ತ್ರ ಬದಲಾಯಿಸಿರುವುದನ್ನು ನಿರಾಕರಿಸಿದ್ದರು.





