ಕಡಲ್ಕೊರೆತಕ್ಕೆ ತಡೆ ಹೇಗೆ?

ಕರ್ನಾಟಕದ ಮಂಗಳೂರಿನಿಂದ ಅಸ್ನೋಟಿ ತನಕದ ಕರಾವಳಿಯುದ್ದಕ್ಕೂ ಮಳೆಗಾಲದಲ್ಲಿ ಎತ್ತರದ ಹಾಗೂ ಬೋರ್ಗರೆಯುವ ಸಮುದ್ರದ ಅಲೆಗಳಿಂದಾಗಿ ಸಮುದ್ರ ಕೊರೆತ ಉಂಟಾಗುತ್ತದೆ. ಪ್ರತೀ ವರ್ಷವೂ ನೂರಾರು ತೆಂಗಿನ ಹಾಗೂ ಇತರ ಮರಗಳು, ಮನೆಗಳು ಸಮುದ್ರ ಸೇರುತ್ತವೆ. ಈ ಮೊದಲು ಬಹಳಷ್ಟು ಕಾರ್ಪೊರೇಟರ್‌ಗಳು, ಮಹಾನಗರ ಪಾಲಿಕೆ ಆಯುಕ್ತರು, ಸಂಸದರು ಇದಕ್ಕಾಗಿ ಶಾಶ್ವತ ತಡೆಗೋಡೆ ಕಟ್ಟುತ್ತೇವೆ ಎಂದು ಹೇಳಿದ್ದೂ ಕಳೆದ ನಲವತ್ತು ವರ್ಷಗಳಿಂದ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇವೆ. ಇದನ್ನೇ ನೆಪವಾಗಿಟ್ಟುಕೊಂಡು ನಾವು ಆರಿಸಿ ಕಳಿಸಿದ ನಾಯಕರು ಆಸ್ಟ್ರೇಲಿಯ, ಚೀನಾ, ಅಮೆರಿಕ ಎಂದು ನಮ್ಮ ತೆರಿಗೆ ಹಣದಲ್ಲೇ ‘ಸ್ಟಡಿ ಟೂರ್’ ಹೋಗಿ ಬಂದರು. ಆದರೆ ಆದದ್ದೇನೂ ಇಲ್ಲ. ಪ್ರತೀವರ್ಷ ಸಮುದ್ರವು ಇನ್ನೂ ಹೆಚ್ಚಾಗಿ ಪಕ್ಕದ ಗೋಡೆಗಳನ್ನು ಬೀಳಿಸಿ ಒಳಬಂದು ಲಕ್ಷಾಂತರ ರೂ. ನಷ್ಟವನ್ನುಂಟು ಮಾಡುತ್ತದೆ.
ಪರಿಹಾರವೇನು?
ಮುಂಬೈ 7 ಸಣ್ಣ ದ್ವೀಪಗಳ ಸಂಗಮ. ಆ ದ್ವೀಪಗಳ ಮಧ್ಯೆ ಮಣ್ಣು, ಕಾಂಕ್ರಿಟ್ ತುಂಬಿಸಿ ಸಮುದ್ರ ಒಳನುಗ್ಗದಂತೆ ಟೆಟ್ರಾಪಾಡ್‌ಗಳನ್ನು ಅಡ್ಡಲಾಗಿ ಹಾಕಲಾಗಿದೆ. ಕಳೆದ 6 ದಶಕಗಳಿಂದ ಒಮ್ಮೆಯೂ ತಡೆಗೋಡೆಗೆ ಹಾನಿಯಾಗಿ ನಷ್ಟವೇ ಆಗಿಲ್ಲ.
ಕರ್ನಾಟಕ ಕರಾವಳಿಯಲ್ಲಿ ಪ್ರತೀವರ್ಷ ಅತೀ ಹೆಚ್ಚಿನ ನಷ್ಟವುಂಟುಮಾಡುವ ತೊಕ್ಕೊಟ್ಟು, ಉಳ್ಳಾಲ, ಕುಂದಾಪುರ ಸಮುದ್ರ ತಟದಲ್ಲಿ ಇಂತಹುದೇ ಟೆಟ್ರಾಪಾಡ್‌ಗಳನ್ನು ಹಾಕಿ ಸಮುದ್ರ ಒಳಬಾರದಂತೆ ಶಾಶ್ವತ ತಡೆಗೋಡೆ ನಿರ್ಮಿಸಬಹುದಿತ್ತಲ್ಲ?. ಪ್ರತೀ ಟೆಟ್ರಾಪಾಡ್ ಐವತ್ತು ಟನ್ ಭಾರವಿರುತ್ತದೆ. ಕಾಂಕ್ರಿಟ್‌ನಿಂದ ತಯಾರಿಸಲ್ಪಟ್ಟ ಇವು ಒಳಬರುವ ಅಲೆಗಳ ಬಲವನ್ನು ತಡೆಯಲು ತಮ್ಮ ಟೆಟ್ರಾ ಹೈಡ್ರಲ್ ಆಕಾರವನ್ನು ಬಳಸುತ್ತವೆ. ಅವುಗಳ ವಿರುದ್ಧ ಸಮುದ್ರದ ನೀರು ಬಾರದೆ, ಬದಲಾಗಿ ನೀರು ಸುತ್ತಲೂ ಹರಿಯುವಂತೆ ಮಾಡುತ್ತದೆ ಹಾಗೂ ಇಂಟರ್‌ಲಾಕ್ ಮಾಡುವ ಮೂಲಕ ಸ್ಥಳಾಂತರವನ್ನು ಕಡಿಮೆ ಮಾಡುತ್ತದೆ. ಇಂತಹುದೇ ನಾಲ್ಕು ಕಾಲುಗಳನ್ನು ಹೊಂದಿದ ಟೆಟ್ರಾಪಾಡ್‌ಗಳನ್ನು ಗೇಟ್‌ವೇ ಆಫ್ ಇಂಡಿಯಾದಿಂದ ಇಡೀ ಮುಂಬೈ ನೆಕ್ಲೆಸ್ ಎಂದು ಕರೆಯಲಾಗುವ ಸಮುದ್ರತೀರಕ್ಕೆ ಕ್ರೇನ್‌ಗಳ ಮೂಲಕ ತಂದು ಸುರಿಯಲಾಗಿದೆ. ಅವುಗಳ ಐವತ್ತು ಟನ್ ತೂಕ ಮತ್ತು ವಿನ್ಯಾಸದಿಂದಾಗಿ ಟೆಟ್ರಾ ಪಾಡ್‌ಗಳು ಅತ್ಯಂತ ತೀವ್ರವಾದ ಹವಾಮಾನ ಪರಿಸ್ಥಿತಿಗಳಲ್ಲಿಯೂ ಹಡಗಿಗೆ ಲಂಗರು ಹಾಕಿದಂತೆ ಸಮುದ್ರತಟದಲ್ಲಿ ಸ್ಥಿರವಾಗಿ ನಿಲ್ಲುತ್ತವೆ. ಒಟ್ಟಿಗೆ ಜೋಡಿಸಲಾದ ಹಲವಾರು ಟೆಟ್ರಾಪಾಡ್‌ಗಳು ಅಲೆಗಳು ಮತ್ತು ಪ್ರವಾಹಗಳ ಶಕ್ತಿಯನ್ನು ಹೊರಹಾಕುವ ಇಂಟರ್‌ಲಾಕಿಂಗ್, ಸರಂಧ್ರ ತಡೆಗೋಡೆಯನ್ನು ರೂಪಿಸುತ್ತವೆ. ಇವು ಸವೆತ ಮತ್ತು ಪ್ರವಾಹ/ಎತ್ತರದ ಅಲೆಗಳನ್ನು ತಡೆದು ಸಮುದ್ರವು ಕರಾವಳಿಯನ್ನು ಮರುರೂಪಿಸುವುದನ್ನು ತಡೆಯುತ್ತದೆ. ಮುಂಬೈನ ಮೆರಿನ್ ಡ್ರೈವ್‌ನಲ್ಲಿ ಕಲ್ಲಿದ್ದಲು ಆಧಾರಿತ ಟಾಟಾ ವಿದ್ಯುತ್ ಕಂಪೆನಿಯಿಂದ ಸಿಗುವ ಬೂದಿಯನ್ನು ಸಂಗ್ರಹಿಸಿ ಟೆಟ್ರಾಪಾಡ್‌ಗಳನ್ನು ತಯಾರಿಸಲಾಗಿದೆ. ಗಟ್ಟಿಯಾದ ಇಟ್ಟಿಗೆಗಳನ್ನು ಇದರಿಂದ ತಯಾರಿಸಲಾಗುತ್ತಿದೆ. ಇಂತಹುದೇ ಟೆಟ್ರಾಪಾಡ್‌ಗಳನ್ನು ಸಮುದ್ರದ ದಡದಲ್ಲಿ ರಾಶಿಯಾಗಿ ಪೇರಿಸಿಟ್ಟರೆ ಇನ್ನೂರು ವರ್ಷಗಳಷ್ಟು ಕಾಲ ಕಡಲ್ಕೊರೆತ ಸಂಭವಿಸುವ ಸಾಧ್ಯತೆ ಇಲ್ಲ. ಇದನ್ನು ನಾವು ಆರಿಸಿದ ಜನನಾಯಕರಿಗೆ ತಿಳಿಸಿ ಹೇಳುವವರು ಯಾರು?







