ತನ್ನನ್ನು ಹೊಗಳಿದ ಜಮ್ಮು-ಕಾಶ್ಮೀರದ ಬಿಜೆಪಿ ಅಧ್ಯಕ್ಷರ ಕುರಿತು ಉಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದು ಹೀಗೆ

ಶ್ರೀನಗರ: ರಾಜಕೀಯ ವಿರೋಧಿಗಳು ಶತ್ರುಗಳಲ್ಲ ಹಾಗೂ ರಾಜಕೀಯವು ವಿಭಜನೆ ಮತ್ತು ದ್ವೇಷದಿಂದ ಕೂಡಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ( National Conference vice president Omar Abdullah)ಶುಕ್ರವಾರ ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಹಾಗೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಡುವೆ ಪರೋಕ್ಷವಾಗಿ ಹೊಂದಾಣಿಕೆ ಇದೆ ಎಂದು ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊಗೆ ಪ್ರತಿಕ್ರಿಯೆಯಾಗಿ ಅಬ್ದುಲ್ಲಾ ಈ ಹೇಳಿಕೆ ನೀಡಿದರು..
ವೀಡಿಯೊದಲ್ಲಿ ಜಮ್ಮು ಹಾಗೂ ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಅವರು ಕೇಂದ್ರಾಡಳಿತ ಪ್ರದೇಶದ ಪ್ರಮುಖ ರಾಜಕೀಯ ನಾಯಕರಲ್ಲಿ ಅಬ್ದುಲ್ಲಾ ಅವರನ್ನು "ರತ್ನ" ಎಂದು ಬಣ್ಣಿಸಿದ್ದಾರೆ.
" ನಾನು ವಿಧಾನಸಭೆಯ ಸದಸ್ಯನಾಗಿದ್ದಾಗ ಉಮರ್ ಕೂಡ ಇದ್ದರು. ಒಬ್ಬ ವ್ಯಕ್ತಿಯಾಗಿ, ಉಮರ್ ಅಬ್ದುಲ್ಲಾ ಅವರನ್ನು ಜಮ್ಮು ಮತ್ತು ಕಾಶ್ಮೀರದ ಉನ್ನತ ರಾಜಕೀಯ ನಾಯಕರಲ್ಲಿ ರತ್ನದ ರೀತಿ ನಾವು ನೋಡಿದ್ದೇವೆ ... ಆದ್ದರಿಂದ ನಾವು ಕೂಡ ಸ್ನೇಹಿತರಾಗಿದ್ದೇವೆ" ಎಂದು ರೈನಾ ಹೇಳಿದರು.
ನಾನು ಕೊರೋನವೈರಸ್‌ನಿಂದ ಬಳಲುತ್ತಿರುವಾಗ ಅಬ್ದುಲ್ಲಾ ನನಗೆ ಕರೆ ಮಾಡಿದ ಮೊದಲ ವ್ಯಕ್ತಿ ಎಂದು ರೈನಾ ಹೇಳಿದರು.
ಟ್ವೀಟ್‌ಗೆ ಪ್ರತಿಕ್ರಿಯಿಸಿದ ಎನ್‌ಸಿ ನಾಯಕ ಅಬ್ದುಲ್ಲಾ, ರಾಜಕಾರಣಿಗಳು ರಾಜಕೀಯವಾಗಿ ಭಿನ್ನಾಭಿಪ್ರಾಯ ಹೊಂದಿದ್ದರೂ ವೈಯಕ್ತಿಕವಾಗಿ ಪರಸ್ಪರ ದ್ವೇಷಿಸಬೇಕಾಗಿಲ್ಲ ಎಂದರು.







