ಮಾಜಿ ಸಚಿವ ರಮಾನಾಥ ರೈ ವಿರುದ್ಧ ವೈಯಕ್ತಿಕ ಟೀಕೆ ಖಂಡನೀಯ: ಸುರತ್ಕಲ್ ಕಾಂಗ್ರೆಸ್

ಮಂಗಳೂರು: ರಾಜಕೀಯ ಕಾರಣಕ್ಕಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಅವರ ವಯಸ್ಸು ದೇಹ, ನಡೆ ಬಗ್ಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ವೈಯಕ್ತಿಕ ಟೀಕೆ ಮಾಡಿರುವುದು ಖಂಡನೀಯ ಎಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ ಹೇಳಿದರು.
ರೈಯವರ ಸಾಧನೆ, ಅಭಿವೃದ್ಧಿ ಬಗ್ಗೆ ಮಾತನಾಡಲಿ. ಆದರೆ, ಅದನ್ನು ಟೀಕಿಸಲು ಸಾಧ್ಯವೇ ಇಲ್ಲ. ಕೇವಲ ನಾರಾಯಣ ಗುರುಗಳ ಬಗ್ಗೆ ಬಿಜೆಪಿ ಸರಕಾರದ ಅವಮಾನದ ಬಗ್ಗೆ ಧ್ವನಿ ಎತ್ತಿದ ಕಾರಣಕ್ಕಾಗಿ ವೈಯಕ್ತಿಕ ತೇಜೋವಧೆ ಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಬಂಟ್ವಾಳದ ಈಗಿನ ಶಾಸಕರು ಕೂಡಾ ಒಳ್ಳೆಯವರೇ. ಆದರೆ, ರಮಾನಾಥ ರೈ ಆರು ಬಾರಿ ಶಾಸಕ, 15 ವರ್ಷ ಸಚಿವರಾಗಿ ಅನುಭವಿಗಳು. ಇಡೀ ಕ್ಷೇತ್ರ ಸುತ್ತಾಡುತ್ತಿದ್ದಾರೆ. ಅಧಿಕಾರಿಗಳಿಗೂ ಅವರ ಬಗ್ಗೆ ಗೌರವ ಇದೆ. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳ ಶೇ.10 ಕೂಡಾ ಈಗ ಮಾಡಲು ಸಾಧ್ಯವಾಗಿಲ್ಲ ಎಂದರು.
ರೈಯವರನ್ನು ಕಲ್ಲಡ್ಕ ಶಾಲೆಯ ಮಧ್ಯಾಹ್ನದ ಊಟದ ವಿಷಯದಲ್ಲಿ ಜನರಿಗೆ ಸುಳ್ಳು ಮಾಹಿತಿ ಕೊಟ್ಟು ಸೋಲಿಸಲಾಗಿತ್ತು. ಅವರೆಂದೂ ಮಕ್ಕಳ ಹೊಟ್ಟೆಗೆ ಹೊಡೆಯುವವಲ್ಲ. ತಿಂಗಳಿಗೆ ನಾಲ್ಕು ಲಕ್ಷ ರೂ. ದುರ್ಬಳಕೆ ಮಾಡುವ ವಿರುದ್ಧ ದನಿ ಎತ್ತಿದ್ದರು. ಅವರನ್ನು ಸೋಲಿಸಿದ ಜನ ಈಗ ಪರಿತಪಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಅವರ ಗೆಲುವು ಶತಃಸಿದ್ಧ ಎಂದರು.
ಹರಿಕೃಷ್ಣ ಬಂಟ್ವಾಳ ಅವರ ಬಗ್ಗೆ ನಮಗೆ ಗೌರವ ಇದೆ. ಅವರು ಬಿಲ್ಲವ ಸಮಾಜದ ಮುಖಂಡರು. ಆದರೆ, ಗೆಜ್ಜೆಗಿರಿ, ಕುದ್ರೋಳಿ ಕ್ಷೇತ್ರಗಳಲ್ಲಿ ವಿವಾದ ಸೃಷ್ಟಿ ಮಾಡಿದ್ದು, ನಾರಾಯಣ ಗುರುಗಳಿಗೆ ಬಿಜೆಪಿ ಸರಕಾರ ಮಾಡಿದ ಅವಮಾನಗಳನ್ನು ಸಮರ್ಥಿಸುವುದು ಸರಿಯಲ್ಲ. ಅವರು ಬಿಲ್ಲವ ಮುಖಂಡರಾಗಿಯೇ ಇರಲಿ. ಬೇಕಾದರೆ ರಾಜಕೀಯ ನಿವೃತ್ತಿ ಘೋಷಿಸಲಿ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುರತ್ಕಲ್ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಕಾರ್ಪೊರೇಟರ್ ಅನಿಲ್ ಕುಮಾರ್, ಪದ್ಮನಾಭ ಕೋಟ್ಯಾನ್, ಶಶಿಕಲಾ ಪದ್ಮನಾಭ, ನೀರಜ್‌ಚಂದ್ರ ಪಾಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.