ಉಡುಪಿ ಜಿಲ್ಲೆಯ ‘ಕಲ್ಪರಸ’ ಕಂಪೆನಿಗೆ ದೇಶದ ಅತ್ಯುತ್ತಮ ರೈತ ಉತ್ಪಾದಕ ಸಂಸ್ಥೆ ಪ್ರಶಸ್ತಿ

ಉಡುಪಿ, ಸೆ.17: ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಮಾರ್ಗದರ್ಶನದಲ್ಲಿ ಕುಂದಾಪುರ ತಾಲೂಕು ಜಪ್ತಿಯಲ್ಲಿ ಪ್ರಾರಂಭಗೊಂಡಿ ರುವ ಉಡುಪಿ ಕಲ್ಪರಸ ಕೋಕೊನಟ್ ಎಂಡ್ ಆಲ್ ಸ್ಪೈಸಸ್ ಪ್ರೊಡ್ಯುಸರ್ ಕಂಪೆನಿ ಲಿಮಿಟೆಡ್ (ಉಕಾಸ)ಗೆ ರಾಷ್ಟ್ರಮಟ್ಟದ ಅತ್ಯುತ್ತಮ ರೈತ ಉತ್ಪಾದಕ ಸಂಸ್ಥೆ ಪ್ರಶಸ್ತಿ ಲಭಿಸಿದೆ.
ಇದೆ ಸೆ.14ರಂದು ಹೊಸದಿಲ್ಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ (ಐಸಿಎಆರ್) ಸಭಾಂಗಣದಲ್ಲಿ ಔಟ್‌ಲುಕ್ ಮೀಡಿಯಾ ಮತ್ತು ಸ್ವರಾಜ್ ಟ್ರ್ಯಾಕ್ಟರ್ ಸಹಯೋಗದಲ್ಲಿ ನಡೆದ ಅಗ್ರಿಟೆಕ್ ಶೃಂಗಸಭೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಉಕಾಸ ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ಉಡುಪ ಜಪ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕೃಷಿಕರ ಆದಾಯ ಹೆಚ್ಚಿಸುವುದರ ಜೊತೆಗೆ ಉದ್ಯೋಗ ಸೃಷ್ಟಿ ಹಾಗೂ ಸಮಾಜಕ್ಕೆ ಆರೋಗ್ಯದಾಯಕ ಉತ್ಪನ್ನ ನೀಡುವ ಚಿಂತನೆಯೊಂದಿಗೆ ವಿನೂತನ ಉತ್ಪನ್ನವಾದ ಕಲ್ಪರಸ ಹಾಗೂ ಅದರ ಉಪಉತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆ ಮಾಡುತ್ತಿರುವ ಉಕಾಸ ಸಂಸ್ಥೆಯನ್ನು ರಾಷ್ಟ್ರಮಟ್ಟದ ಅತ್ಯುತ್ತಮ ರೈತ ಉತ್ಪಾದಕ ಸಂಸ್ಥೆಯಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಾಸರಗೋಡಿನ ಸಿಪಿಸಿಆರ್‌ಐ ಇದರ ತಂತ್ರಜ್ಞಾನದ ನೆರವಿನೊಂದಿಗೆ, ಉಡುಪಿ ಜಿಲ್ಲಾ ಅಬಕಾರಿ ಇಲಾಖೆಯ ಪರವಾನಿಗೆ ಪಡೆದು ಕಾರ್ಯಾ ಚರಿಸುತ್ತಿರುವ ಈ ಕಂಪನಿಗೆ ಉಡುಪಿ ಜಿಲ್ಲಾ ಪಂಚಾಯತ್‌ನ ತೋಟಗಾರಿಕಾ ಇಲಾಖೆ ಹಾಗೂ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನ ಕೂಡ ದೊರಕಿದೆ.
ರಾಷ್ಟ್ರ ಮಟ್ಟದ ಈ ಪ್ರಶಸ್ತಿಗಾಗಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮೂಲಕ ಉಕಾಸದ ನಾಮಿನೇಶನ್ ಸಲ್ಲಿಸಲಾಗಿತ್ತು. ರಾಷ್ಟ್ರಮಟ್ಟದಲ್ಲಿ ಉಕಾಸದ ಸಾಧನೆಯನ್ನು ಗುರುತಿಸಿ, ಪ್ರಶಸ್ತಿ ನೀಡಿರುವುದು ಈ ಭಾಗದ ತೆಂಗು ಬೆಳೆಗಾರ ರಲ್ಲಿ ಇನ್ನೂ ಹೆಚ್ಚಿನ ಹುಮ್ಮಸ್ಸನ್ನು ಮೂಡಿಸಿದೆ. ಮುಂದಿನ ದಿನಗಳಲ್ಲಿ ಕಲ್ಪರಸ ಹಾಗೂ ಅದರ ಉಪ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕೂಡ ಲಭಿಸುವ ಪೂರ್ಣ ವಿಶ್ವಾಸ ಮೂಡಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.







