ತಳಮಟ್ಟದಲ್ಲಿ ಜನರ ಸಹಭಾಗಿತ್ವವಿಲ್ಲದೇ ಪ್ರಜಾಪ್ರಭುತ್ವ ಯಶಸ್ವಿಯಾಗದು: ಸ್ವಪ್ನ ಕರೀಂ

ಮಣಿಪಾಲ, ಸೆ.17: ತಳಮಟ್ಟದಲ್ಲಿ ಜನರ ಸಹಭಾಗಿತ್ವವಿಲ್ಲದೆ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ ಎಂದು ಜನಾಗ್ರಹದ ನಾಗರಿಕ ಸಹಭಾಗಿತ್ವದ ಮುಖ್ಯಸ್ಥೆ ಸಪ್ನಾ ಕರೀಂ ಅಭಿಪ್ರಾಯಪಟ್ಟಿದ್ದಾರೆ.
ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ವಿಕೇಂದ್ರೀಕರಣವು ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯವಾಗಿದ್ದು, ಅದು ವಾಸ್ತವದಲ್ಲಿ ಕಾರ್ಯರೂಪಕ್ಕೆ ಬರಬೇಕಾಗಿದೆ ಎಂದು ಅವರು ಹೇಳಿದರು.
ಸರಕಾರವು ಪರಿಹರಿಸಲೇಬೇಕಾಗದ ಸಾಕಷ್ಟು ನಾಗರಿಕ ಸಮಸ್ಯೆಗಳಿವೆ. ಜನರು ಒತ್ತಡ ಹೇರದೆ ಮತ್ತು ಸ್ಥಳೀಯ ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸದ ಹೊರತು ಪ್ರಜಾಪ್ರಭುತ್ವವು ಸಂಪೂರ್ಣ ಮತ್ತು ಅರ್ಥಪೂರ್ಣವಾಗುವುದಿಲ್ಲ ಎಂದು ಸಪ್ನಾ ಕರೀಂ ವಿವರಿಸಿದರು.
ಮಹಾತ್ಮ ಗಾಂಧಿಯವರ ಮೌಲ್ಯಗಳಿಂದ ಪ್ರೇರಿತರಾದ ಸರಕಾರೇತರ ಸಂಸ್ಥೆಯಾಗಿರುವ ಜನಾಗ್ರಹ ಸಂಘಟನೆಯ ವಿವಿಧ ಕಾರ್ಯಗಳ ಕುರಿತು ಅವರು ವಿವರಿಸಿದರು.
ಮಣಿಪಾಲ ಜಿಸಿಪಿಎಎಸ್ ಸಂಸ್ಥೆ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸಂವಾದವನ್ನು ನಡೆಸಿಕೊಟ್ಟರು. ಗೌತಮಿ ಕಾಕತ್ಕರ್ ಸ್ವಾಗತಿಸಿದರು.







