‘ನಾವು ಬೇಡ ಎಂದರೂ ಅವರನ್ನೇ ವಿಮ್ಸ್ ನಿರ್ದೇಶಕರನ್ನಾಗಿ ನೇಮಿಸಿದರು': ಸಚಿವ ಸುಧಾಕರ್ ವಿರುದ್ಧ BJP ಶಾಸಕನ ಅಸಮಾಧಾನ

ಬಳ್ಳಾರಿ, ಸೆ. 17: ‘ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿನ ರೋಗಿಗಳ ಸಾವು ಬೇರೆ ಕಾರಣಕ್ಕೆ ಸಂಭವಿಸಿದ್ದರೂ ನಿರ್ದೇಶಕರ ನಿರ್ಲಕ್ಷ್ಯತೆ ಇದೆ. ನಾವು ಬೇಡವೆಂದು ಮನವಿ ಮಾಡಿದರೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಡಾ.ಗಂಗಾಧರ್ ಅವರನ್ನು ವಿಮ್ಸ್ ನ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದಾರೆ' ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರತಿನಿತ್ಯ ನಾಲ್ಕೈದು ಸಾವಿರ ಮಂದಿ ವಿಮ್ಸ್ ಆಸ್ಪತ್ರೆಗೆ ಬರುತ್ತಾರೆ. ಹೀಗಾಗಿ ಆಸ್ಪತ್ರೆ ಆಡಳಿತ ಮಂಡಳಿಗೆ ಜವಾಬ್ದಾರಿಯುವ ವ್ಯಕ್ತಿ ಅಗತ್ಯ. ಆದರೆ, ಸಚಿವ ಡಾ.ಸುಧಾಕರ್ ಹಠದಿಂದ ವಿಮ್ಸ್ ನಿರ್ದೇಶಕರಾಗಿ ಗಂಗಾಧರ್ ನೇಮಕಾತಿ ಮಾಡಿದ್ದಾರೆ. ನೇಮಕಾತಿ ವೇಳೆ ಸ್ಥಳೀಯ ಶಾಸಕರಿಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ' ಎಂದು ದೂರಿದರು.
ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ
‘ಆರೋಗ್ಯ ಸಚಿವರು ನಮ್ಮ ಯಾವುದೇ ಸಲಹೆಗಳನ್ನು ಪಡೆಯುವುದಿಲ್ಲ. ವಿಮ್ಸ್ ಆಸ್ಪತ್ರೆ ಎಂದರೇ ದೊಡ್ಡ ಆಸ್ಪತ್ರೆಯಾಗಿದೆ. ಇಲ್ಲಿನ ನಿರ್ದೇಶಕರು ಹಣ ಕೊಟ್ಟು ಬಂದಿದ್ದಾರೆಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಗಂಗಾಧರ್ ಅವರಿಗಿಂತ ಅರ್ಹರು ಇದ್ದರು. ಶಾಸಕರಿಗೆ ಸಚಿವರು ಯಾವುದೇ ಮಾನ್ಯತೆ ನೀಡುವುದಿಲ್ಲ. ಹೀಗಾಗಿ ನಾವು ಏನೇ ಸಮಸ್ಯೆ ಇದ್ದರೂ ಮುಖ್ಯಮಂತ್ರಿ ಬಳಿಗೆ ಹೋಗುತ್ತೇವೆ' ಎಂದು ಸೋಮಶೇಖರ್ ರೆಡ್ಡಿ, ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.