ಕುಂದಾಪುರ: ಶ್ರೀವಿಶ್ವಕರ್ಮ ಜಯಂತಿ ಆಚರಣೆ

ಕುಂದಾಪುರ : ಕುಂದಾಪುರದ ತಾಲೂಕು ಆಡಳಿತ ಹಾಗೂ ಕುಂದಾಪುರ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಶನಿವಾರ ಶ್ರೀವಿಶ್ವಕರ್ಮ ಜಯಂತಿ ಆಚರಣೆಯು ಕುಂದಾಪುರ ಮಿನಿ ವಿಧಾನಸೌಧದಲ್ಲಿ ನಡೆಯಿತು.
ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿ ದರು. ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರಹೋಬಳಿ ಮಾತನಾಡಿ, ವಿಶ್ವಕರ್ಮ ಸಮಾಜವು ಇನ್ನಷ್ಟು ಶಕ್ತಿಯುತವಾಗ ಬೇಕಾದಲ್ಲಿ ಸಂಘಟನೆ ಪ್ರಬಲವಾಗಬೇಕು. ವಿಶ್ವಕರ್ಮ ನಿಗಮಕ್ಕೆ ಕೊಡುವ ಅನುದಾನವನ್ನು ಹೆಚ್ಚಿಸಬೇಕು. ರಾಜ್ಯದಲ್ಲಿ ೪೦ ಲಕ್ಷದಷ್ಟು ಜನಸಂಖ್ಯೆಯಿದ್ದು, ಆದರೆ ಇನ್ನು ಸಹ ಕೆಲವೊಂದು ಬೇಡಿಕೆಗಳು ಈಡೇರಿಲ್ಲ. ನಮ್ಮ ಸಮಾಜದ ಯುವಕರಿಗೆ ನೀಡುವ ತಾಂತ್ರಿಕ ಕೌಶಲ ಕುರಿತ ಶಿಕ್ಷಣವನ್ನು ಸರಕಾರ ಸಮರ್ಪಕವಾದ ರೀತಿಯಲ್ಲಿ ಜಾರಿ ಮಾಡಬೇಕು ಎಂದು ಹೇಳಿದರು.
ವಿಶ್ವಕರ್ಮ ಅಭಿವೃದ್ಧಿ ನಿಗಮ ಮಾಜಿ ನಿರ್ದೇಶಕ ಕೋಣಿ ನಾರಾಯಣ ಆಚಾರ್, ಕಾಳಿಕಾಂಬಾ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ರಮೇಶ್ ಆಚಾರ್ ಸಬ್ಲಾಡಿ, ಬಾರ್ಕೂರು ಕಾಳಿಕಾಂಬಾ ದೇಗುಲದ ಆಡಳಿತ ಮಂಡಳಿ ಸದಸ್ಯ ರಾಮಚಂದ್ರ ಆಚಾರ್ ಕೋಟೇಶ್ವರ ಮಾತನಾಡಿದರು.
ವಿಶ್ವಬ್ರಾಹ್ಮಣ ಸಂಘದ ಪ್ರತಿನಿಧಿಗಳಾದ ವೆಂಕಟೇಶ ಆಚಾರ್ಯ, ಪ್ರಶಾಂತ್ ಆಚಾರ್ಯ ಹುಚ್ಕೆರೆ, ಅಶೋಕ ಆಚಾರ್ಯ ಮಾರ್ಗೋಳಿ, ಶಶಿಧರ ಆಚಾರ್ಯ ಬಂಡಾಡಿ, ಶ್ರೀನಿವಾಸ ಆಚಾರ್ಯ ಕುಂಭಾಶಿ, ದಿನೇಶ್ ಆಚಾರ್ಯ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು. ಉಪ ತಹಶೀಲ್ದಾರ್ ವಿನಯ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







