ಸಂಸದ ತೇಜಸ್ವಿ ಸೂರ್ಯರ ಹುಚ್ಚಾಟದಿಂದ KSRTC ಆಸ್ಪತ್ರೆ ಟ್ರಸ್ಟ್ ಗೆ ವರ್ಗಾವಣೆ: ಎಚ್.ವಿ.ಅನಂತಸುಬ್ಬರಾವ್
ಆಸ್ಪತ್ರೆಯನ್ನು ಸಾರಿಗೆ ಸಂಸ್ಥೆಯಲ್ಲೇ ಉಳಿಸುವಂತೆ ಒತ್ತಾಯ

ಬೆಂಗಳೂರು, ಸೆ.17: ಹಲವು ದಶಕಗಳಿಂದ ಜಯನಗರ 4ನೆ ಬ್ಲಾಕ್‍ನಲ್ಲಿರುವ ಕೆಎಸ್ಸಾರ್ಟಿಸಿ (KSRTC) ಆಸ್ಪತ್ರೆಯು ಸಂಸದ ತೇಜಸ್ವಿ ಸೂರ್ಯರ ಹುಚ್ಚಾಟದಿಂದಾಗಿ ಶ್ರೀ ವಾಸವಿ ಕೌಟುಂಬಿಕ ಟ್ರಸ್ಟ್ ಗೆ ವರ್ಗಾವಣೆ ಆಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ ಆಸ್ಪತ್ರೆಯನ್ನು ಸಾರಿಗೆ ಸಂಸ್ಥೆಯಲ್ಲೇ ಉಳಿಸುವಂತೆ ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಒತ್ತಾಯಿಸಿದೆ.
ಈ ಕುರಿತು ಶನಿವಾರ ಫೆಡರೇಷನ್‍ನ ಎಚ್.ವಿ.ಅನಂತಸುಬ್ಬರಾವ್ ಪತ್ರಿಕಾ ಪ್ರಕಟನೆ ನೀಡಿದ್ದು, ‘ಕೆಲವು ತಿಂಗಳುಗಳ ಹಿಂದೆ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ‘ಶ್ರೀ ವಾಸವಿ ಕೌಟುಂಬಿಕ ಟ್ರಸ್ಟ್’ಗೆ ಆಸ್ಪತ್ರೆಯನ್ನು ದಾನ ಮಾಡಿಸಲು ಪ್ರಯತ್ನಪಟ್ಟಿದ್ದರು. ಆಗ ಅದನ್ನು ನಾವು ವಿರೋಧಿಸಿದ್ದೆವು. ಆಗ ತಣ್ಣಗಾದ ವಿಷಯ ಬಹಳ ತರಾತುರಿಯಿಂದ ಮೇಲೆದ್ದಿದೆ. ಜು.25ರಂದು ಸೂರ್ಯರ ಒತ್ತಡದಿಂದಾಗಿ ಟೆಂಡರ್ ಜಾಹೀರಾತನ್ನು ಪ್ರಕಟಿಸಲಾಗಿದೆ.
ಜಾಹೀರಾತಿನಲ್ಲಿ ಹಾಕಿರುವ ಷರತ್ತುಗಳನ್ನು ನೋಡಿದರೆ ಯಾವುದೋ ಒಂದು ನಿರ್ದಿಷ್ಟವಾದ ಟ್ರಸ್ಟ್ ಗೆ ಆಸ್ಪತ್ರೆಯನ್ನು ಒಪ್ಪಿಸಲೆಂದೇ ಈ ಜಾಹೀರಾತನ್ನು ಸಿದ್ಧಪಡಿಸಿದಂತಿದೆ. ಅದರಲ್ಲೂ ಸಂಸತ್ ಸದಸ್ಯರ ನಿಧಿಯಿಂದ ಹಣಕೊಡಿಸುವ ಭರವಸೆಯು ಈ ಜಾಹೀರಾತಿನಲ್ಲಿ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯನ್ನು ಟ್ರಸ್ಟ್ ಗೆ ವರ್ಗಾಹಿಸಿದರೆ, ಸಾರಿಗೆ ನಿಗಮದ ನೌಕರರೂ ತಾವು ಪಡೆಯುವ ಸೇವೆಗೆ ಹಣ ತೆರಬೇಕಾಗುತ್ತದೆ. ಕೆಎಸ್ಸಾರ್ಟಿಸಿ ಆಸ್ಪತ್ರೆಯು ಸಾರಿಗೆ ನಿಗಮದ ಸಿಬ್ಬಂದಿಗಳಿಗೆ ಮತ್ತು ಅವರ ಕುಟುಂಬ ವರ್ಗಗಳಿಗೆ ಸೇವೆ ಸಲ್ಲಿಸುತ್ತಿದೆ. ಈ ಆಸ್ಪತ್ರೆಯನ್ನು ಉನ್ನತ ದರ್ಜೆಗೆ ಏರಿಸಿ ಅದರ ಸೇವೆಯನ್ನು ಹೆಚ್ಚಿಸಬೇಕು ಎಂದು ಅವರು ಕೆಎಸ್ಸಾರ್ಟಿಸಿ ಆಡಳಿತ ಮಂಡಳಿಗೆ ವಿನಂತಿಸಿಕೊಂಡಿದ್ದಾರೆ.







