ಉಡುಪಿ: ಸ್ಕೂಟರ್ ಸವಾರ ಮೃತ್ಯು ಪ್ರಕರಣ: ಆರೋಪಿ ಲಾರಿ ಚಾಲಕನಿಗೆ ಜೈಲು ಶಿಕ್ಷೆ, ದಂಡ

ಉಡುಪಿ, ಸೆ.17: 11 ವರ್ಷಗಳ ಹಿಂದೆ ಅಪಘಾತದಿಂದ ಸ್ಕೂಟರ್ ಸವಾರನ ಸಾವಿಗೆ ಕಾರಣವಾದ ಪ್ರಕರಣದ ಆರೋಪಿ ಲಾರಿ ಚಾಲಕನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಸೆ.15ರಂದು ಆದೇಶ ನೀಡಿದೆ.
ಕೇರಳ ರಾಜ್ಯದ ಕ್ಯಾಲಿಕಟ್ ಕುನ್ನಮಂಗಲಂ ನಿವಾಸಿ ಶಮೀರ್ (40) ಶಿಕ್ಷೆಗೆ ಗುರಿಯಾಗಿರುವ ಆರೋಪಿ. 2011ರ ಡಿ.17ರಂದು ರಾತ್ರಿ ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆ ಹೋಗುತ್ತಿದ್ದ ಲಾರಿಯು ಬನ್ನಂಜೆ ಕಡೆಯಿಂದ ಕರಾವಳಿ ಬೈಪಾಸ್ ದಾಟಲು ನಿಲ್ಲಿಸಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಸತೀಶ ಪೂಜಾರಿ ಸ್ಥಳದಲ್ಲಿಯೇ ಮೃತಪಟ್ಟರು. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಗಿರೀಶ ಎಸ್.ವಿ. ತನಿಖೆ ನಡೆಸಿ ದೋಷಾ ರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್, ಪ್ರಕರಣದ ಆರೋಪಿ ವಿರುದ್ಧದ ಆರೋಪವ ರುಜುವಾಗಿದೆ ಎಂದು ಅಭಿಪ್ರಾಯ ಪಟ್ಟು, ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ ಆದೇಶ ನೀಡಿದರು. ರಾಜ್ಯ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದರು.





