ಅರ್ಮೆನಿಯ-ಅಝರ್ಬೈಝಾನ್ ಗಡಿಕಾಳಗದಲ್ಲಿ 210ಕ್ಕೂ ಅಧಿಕ ಬಲಿ

photo : NDTV
ಯೆರೆವಾನ್,ಸೆ.17: ಮಾಜಿ ಸೋವಿಯತ್ ಒಕ್ಕೂಟದ ರಾಷ್ಟ್ರಗಳಾದ ಅರ್ಮೆನಿಯ ಹಾಗೂ ಆಝರ್ಬೈಝಾನ್ ಸೇನೆಗಳ ನಡುವೆ ಕಳೆದ ಒಂದು ವಾರದಿಂದ ನಡೆಯುತ್ತಿರುವ ಗಡಿ ಘರ್ಷಣೆಯಲ್ಲಿ 210ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಮಂಗಳವಾರ ಆರಂಭಗೊಂಡ ಘರ್ಷಣೆಯು ಅಂತಾರಾಷ್ಟ್ರೀಯ ಸಂಧಾನದ ಬಳಿಕ ಗುರುವಾರ ಅಂತ್ಯಗೊಂಡಿತ್ತು. ಈ ಭೀಕರ ಘರ್ಷಣೆಗೆ ಉಭಯ ದೇಶಗಳು ಪರಸ್ಪರರನ್ನು ದೂಷಿಸಿವೆ.
ಘರ್ಷಣೆಯಲ್ಲಿ ತಾನು 77 ಸೈನಿಕರನ್ನು ಕಳೆದುಕೊಂಡಿರುವುದಾಗಿ ಅಝರ್ಬೈಝಾನ್ನ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಈ ಮಧ್ಯೆ ಅರ್ಮೆನಿಯದ ಪ್ರಧಾನಿ ನಿಕೊಲ್ ಪಾಶಿನಿಯಾನ್ ಅವರು, ಕಾಳಗದಲ್ಲಿ ತನ್ನ ದೇಶದ ಕನಿಷ್ಠ 135 ಸೈನಿಕರು ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅಝರ್ಬೈಝಾನ್ ಹಾಗೂ ಅರ್ಮೆನಿಯ ಪಡೆಗಳ ನಡುವೆ ಗಡಿವಿವಾಕ್ಕೆ ಸಂಬಂಧಿಸಿ ಹಲವು ಬಾರಿ ಸಂಘರ್ಷಗಳು ನಡೆದಿದ್ದು, ಈ ಬಾರಿದ ತಾರಕಕ್ಕೇರಿದೆ.
ಅಝರ್ಬೈಜಾನ್ ಪಡೆಗಳ ದಾಳಿಯಲ್ಲಿ ತನ್ನ ದೇಶದ ಓರ್ವ ನಾಗರಿಕ ಸಾವನ್ನಪ್ಪಿದ್ದು, ಇತರ ಆರು ಮಂದಿ ಗಾಯಗೊಂಡಿದ್ದಾರೆಂದು ಅರ್ಮೆನಿಯದ ಮಾನವಹಕ್ಕುಗಳ ಹೋರಾಟಗಾರ್ತಿ ಕ್ರಿಸ್ಟಿನಾ ಗ್ರಿಗೊರಿಯಾನ್ ತಿಳಿಸಿದ್ದಾರೆ.
ಘರ್ಷಣೆಯಲ್ಲಿ ಅಝರ್ಬೈಜಾನಿ ಪಡೆಗಳು ನಾಗರಿಕರ ಮೇಲೆ ಘೋರವಾದ ದೌರ್ಜನ್ಯಗಳನ್ನು ಎಸಗಿದ್ದಾರೆಂದು ಅರ್ಮೆನಿಯದ ಸಶಸ್ತ್ರ ಪಡೆಗಳ ವರಿಷ್ಠ ಎಡ್ವರ್ಡ್ ಅಸ್ರಿಯಾನ್ ತಿಳಿಸಿದ್ದಾರೆ.