ಪದವಿ ತರಗತಿಯ ವಿದ್ಯಾರ್ಥಿಗಳಿಗೆ ‘ಪ್ರಾದೇಶಿಕ ಇತಿಹಾಸ’ ತೊಡಕು; ಮಂಗಳೂರು ವಿವಿ ಇತಿಹಾಸ ಅಧ್ಯಾಪಕರ ಸಂಘ ಮನವಿ

ಮಂಗಳೂರು, ಸೆ.17: ಮಂಗಳೂರು ವಿವಿ ವ್ಯಾಪ್ತಿಯ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ತೃತೀಯ ಸೆಮಿಸ್ಟರ್‌ನ ಇತಿಹಾಸ ಪಠ್ಯದಲ್ಲಿ ‘ಪ್ರಾದೇಶಿಕ’ ತೊಡಕು ಸೃಷ್ಟಿಯಾಗಿದ್ದು, ಇದನ್ನು ಸರಿಪಡಿಸಬೇಕು ಎಂದು ಮಂಗಳೂರು ವಿವಿ ಇತಿಹಾಸ ಅಧ್ಯಾಪಕರ ಸಂಘವು ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.
ಎನ್‌ಇಪಿ ಶಿಕ್ಷಣ ಕ್ರಮದಂತೆ ಉನ್ನತ ಶಿಕ್ಷಣ ಮಂಡಳಿಯು ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ಪ್ರತಿನಿಧಿಗಳನ್ನು ಸೇರಿಸಿಕೊಂಡು ಅಧ್ಯಯನದ ಚೌಕಟ್ಟನ್ನು ತಯಾರಿಸುತ್ತದೆ. 2022-23ನೆ ಶೈಕ್ಷಣಿಕ ಸಾಲಿಗೆ ಎಲ್ಲಾ ವಿವಿಗಳ ತೃತೀಯ ಸೆಮಿಸ್ಟರ್ ಸಂಬಂಧ ಎಲ್ಲಾ ಪಠ್ಯಕ್ರಮಗಳನ್ನು ಉನ್ನತ ಶಿಕ್ಷಣ ಮಂಡಳಿಯು ಸಿದ್ಧಪಡಿಸಿದೆ. ರಾಜ್ಯದಲ್ಲಿ 5 ಪ್ರಾದೇಶಿಕ ವಲಯಗಳಿದ್ದು, ಮಂಗಳೂರು ವಿವಿಯು ಕೊಡಗು-ಕರಾವಳಿ ಪ್ರಾದೇಶಿಕ ವಲಯವಾಗಿ ಗುರುತಿಸಲ್ಪಟ್ಟಿವೆ. ರಾಜ್ಯದ 5 ವಲಯಗಳ ಪೈಕಿ ಕೊಡಗು-ಕರಾವಳಿ ಪ್ರಾದೇಶಿಕ ವಲಯವನ್ನು ಹೊರತುಪಡಿಸಿ ಉಳಿದ 4 ವಲಯಗಳಲ್ಲಿ ಆಯಾ ಪ್ರಾದೇಶಿಕ ಇತಿಹಾಸದ ಅಧ್ಯಯನಕ್ಕೆ ಅವಕಾಶ ನೀಡಲಾಗಿದೆ. ಆದರೆ ಕೊಡಗು-ಕರಾವಳಿ ಪ್ರಾದೇಶಿಕ ವಲಯದ ವಿದ್ಯಾರ್ಥಿಗಳು ಸ್ಥಳೀಯ ಇತಿಹಾಸ ಪಠ್ಯ ಅಧ್ಯಯನದಿಂದ ವಂಚಿತರಾಗಿದ್ದಾರೆ. ಹಾಗಾಗಿ ತೃತೀಯ ಸೆಮಿಸ್ಟರ್‌ಗೆ ಕರಾವಳಿಯ ಇತಿಹಾಸದ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಂಘದ ಡಾ. ಜಯರಾಮ ಶೆಟ್ಟಿಗಾರ್, ಡಾ. ನವೀನ್ ಒತ್ತಾಯಿಸಿದ್ದಾರೆ.