ವಿಪಕ್ಷ ನಾಯಕರೇ ಬಿಜೆಪಿಗೆ ಬಂದ್ರೆ ಸ್ವಾಗತ: ಸಿ.ಟಿ.ರವಿ

ಚಿಕ್ಕಮಗಳೂರು, ಸೆ.17: ಕಾಂಗ್ರೆಸ್ ಅನ್ಯಾಯ ಮಾಡಿದೆ, ಬಿಜೆಪಿ ಸೇರುತ್ತೇನೆ ಎಂದರೆ ಬನ್ನಿ ಎನ್ನುತ್ತೇವೆ, ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕರೂ ಬರುತ್ತೇವೆ ಎಂದರೂ ಬನ್ನಿ ಎನ್ನುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋವಾದಲ್ಲಿ 11 ಶಾಸಕರಲ್ಲಿ 9ಜನ ಬಿಜೆಪಿಗೆ ಬಂದಿದ್ದಾರೆ. ನಾವು ಯಾರಿಗೂ ಡಿಮ್ಯಾಂಡ್ ಮಾಡಿ ಬನ್ನಿ ಅಂದಿಲ್ಲ. ಅವರೇ ಬಂದು ಸೇರುತ್ತೇವೆ ಎಂದಾಗ ಬೇಡ ಅನ್ನಲು ನಾವೇನು ಸನ್ಯಾಸಿಗಳಲ್ಲ. ರಾಜ್ಯದಲ್ಲೂ ವಿಪಕ್ಷ ನಾಯಕರೇ ಬರುತ್ತೀನಿ ಎಂದರೂ ಬನ್ನಿ ಎನ್ನುತ್ತೇವೆಂದು ವಿಪಕ್ಷ ನಾಯಕರನ್ನು ಆಹ್ವಾನಿಸಿದರು.
ರಾಜಕೀಯದಲ್ಲಿ ಆತ್ಮತೃಪ್ತಿ ಅಥವಾ ಭವಿಷ್ಯ ಎರಡರಲ್ಲಿ ಒಂದಿರಬೇಕು. ಈಗ ಕಾಂಗ್ರೆಸ್‍ನಲ್ಲಿ ಆತ್ಮತೃಪ್ತಿ, ಭವಿಷ್ಯ ಎರಡೂ ಇಲ್ಲ. ಆ ಪಕ್ಷದಲ್ಲಿ ಯಾರಿರ್ತಾರೆ, ಹೆತ್ತವರಿಗೆ ಹೆಗ್ಗಣ ಮುದ್ದಾದರೇ ಉಳಿದವರಿಗೆ ಮುದ್ದಾ ಗುತ್ತಾ, ಹಾಗಾಗಿದೆ ಕಾಂಗ್ರೆಸ್ ಸ್ಥಿತಿ ಎಂದು ಲೇವಡಿ ಮಾಡಿದರು.
ಕೊತ್ವಾಲ್ ರಾಮಚಂದ್ರ ಶಿಷ್ಯರೂ ರಾಜಕಾರಣದಲ್ಲಿ ಇದ್ದಾರೆ. ಅವರಿಂದ ತೊಂದರೆಯಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಸಿದ್ದರಾಮಯ್ಯ ರವರಿಗೆ ಹೆಚ್ಚಿನ ಭದ್ರತೆ ಕುರಿತು ವ್ಯಂಗ್ಯವಾಡಿದರು.







