ಕಾಲುವೆ ತೆರವು ವಿಚಾರದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ-ದ.ಕ. ಅಪರ ಜಿಲ್ಲಾಧಿಕಾರಿ

ಪುತ್ತೂರು: ಕಾಲುವೆ ಜಾಗ ಅತಿಕ್ರಮಣಗೊಂಡಿದ್ದಲ್ಲಿ ಅದನ್ನು ತೆರವುಗೊಳಿಸುವ ಬಗ್ಗೆ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ತೆರವು ಕಾರ್ಯಕ್ಕೆ ನೋಟಿಸ್ ನೀಡಲು ಕಾಯಬೇಕಾಗಿಲ್ಲ ಎಂದು ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ ಹೆಚ್.ಕೆ.ಕೃಷ್ಣಮೂರ್ತಿ ಕಂದಾಯ ಅಧಿಕಾರಿಗಳು ಸೇರಿದಂತೆ ಗ್ರಾಪಂಗಳಿಗೆ ಸೂಚನೆ ನೀಡಿದರು.
ಪುತ್ತೂರು ತಾಲೂಕಿನ ಕಬಕ ಗ್ರಾಪಂ ವ್ಯಾಪ್ತಿಯ ಮುರ ಗೌಡ ಸಮುದಾಯ ಭವನದಲ್ಲಿ ಶನಿವಾರ ಅಪರ ಜಿಲ್ಲಾಧಿಕಾರಿ ಹೆಚ್.ಕೆ.ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಬಕ ಗ್ರಾಪಂ ವ್ಯಾಪ್ತಿಯ ಕೃಷಿಕರೊಬ್ಬರು ತಮ್ಮ ಕೃಷಿ ಜಾಗದಲ್ಲಿ ಕಾಲುವೆ ಜಾಗವೊಂದರ ಅತಿಕ್ರಮಣವಾದ ವಿಚಾರವನ್ನು ಅವರ ಗಮನಕ್ಕೆ ತಂದಾಗ ಈ ಸೂಚನೆ ನೀಡಿದರು.
ಕಬಕ ಗ್ರಾಪಂ ವ್ಯಾಪ್ತಿಯಲ್ಲಿ ನಾನು ಸೇರಿ ಸುಮಾರು 60 ಮನೆಗಳಿಗೆ ರಸ್ತೆ ವ್ಯವಸ್ಥೆ ಇಲ್ಲ. ನಮಗೆ ರಸ್ತೆಯನ್ನು ಶೀಘ್ರ ಮಾಡಿಕೊಡಿ ಎಂದು ಸ್ಥಳೀಯರಾದ ಜನಾರ್ದನ್ ಎಂಬವರು ಬೇಡಿಕೆ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಥಳೀಯರದ ಭೀಮ್ ಭಟ್ ಎಂಬವರು ಇದಕ್ಕೆ ಬೇಕಾದ ರಸ್ತೆಯನ್ನು ನಾನು ಬಿಟ್ಟುಕೊಡುತ್ತೇವೆ. ನನಗೆ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಲ್ಪ ಜಾಗವನ್ನು ನೀಡಬೇಕು ಎಂದು ತಿಳಿಸಿದರು. ಈ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾದಾಗ ಅಪರ ಜಿಲ್ಲಾಧಿಕಾರಿಗಳು ಶಹಬಾಸ್ ಹೇಳಿ ಜಾಗದ ವ್ಯವಸ್ಥೆ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಕೋಡಿಂಬಾಡಿ ಗ್ರಾಮದಲ್ಲಿ ಕಸ ವಿಲೇವಾರಿ ಘಟನೆ ರಚಿಸುವಂತೆ ಮನವಿ ಮಾಡಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಕೋಡಿಂಬಾಡಿ ಗ್ರಾಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಂಜೀವ ಮಠಂದೂರು, ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಕಸ ವಿಲೇವಾರಿ ಘಟಕ, ಪ್ರತೀ ಗ್ರಾಪಂ ವ್ಯಾಪ್ತಿಯಲ್ಲಿ ಸ್ಮಶಾಸ ನಿರ್ಮಾಣ, ಕುಡಿಯುವ ನೀರು ಮುಂತಾದವುಗಳನ್ನು ಆದ್ಯತೆ ನೆಲೆಯಲ್ಲಿ ಗ್ರಾಮಸ್ಥರಿಗೆ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಗ್ರಾಪಂ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ತುರ್ತಾಗಿ ಸಭೆ ನಡೆಸಿ ಚರ್ಚಿಸಬೇಕು ಎಂದು ಇಲಾಖೆಗಳಿಗೆ ಸೂಚನೆ ನೀಡಿದರು.
ಹೋಬಳಿ ಬದಲಾವಣೆ ಕುರಿತು ವ್ಯಕ್ತಿಯೊಬ್ಬರು ಅಹವಾಲು ನೀಡಿದಾಗ, ಹೋಬಳಿ ಬದಲಾವಣೆ ಸರಕಾರ ಮಟ್ಟದಲ್ಲಿ ಸಾಧ್ಯ. ನಮ್ಮ ಮಟ್ಟದಲ್ಲಿ ಅಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಕಬಕ ಗ್ರಾಪಂ ವ್ಯಾಪ್ತಿಯಲ್ಲಿ ಜಾಗವೊಂದನ್ನು ಶೇಂದಿ ಅಂಗಡಿಗೆ ಮೀಸಲಿಡಲಾಗಿದ್ದು, ಈ ಜಾಗವನ್ನು ಮಕ್ಕಳ ಚಟುವಟಿಕಾ ಕೇಂದ್ರವಾಗಿ ಮಾಡಬೇಕು ಎಂದು ಗ್ರಾಮಸ್ಥರೊಬ್ಬರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು.
ಚಿಕ್ಕಮುಡ್ನೂರು-ಬೆಳ್ಳಿಪ್ಪಾಡಿ-ಬನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ವಿವಾದಿತ ಬಸ್ ತಂಗುದಾಣ ನಿರ್ಮಾಣದ ಕುರಿತು ಅಲ್ಲಿಯ ಸ್ಥಳೀಯರು ಮೊದಲು ಇದ್ದ ಜಾಗದಲ್ಲೇ ಬಸ್ ತಂಗುದಾಣ ನಿರ್ಮಿಸುವಂತೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಈ ಸಮಸ್ಯೆಯಿಂದಾಗಿ ಕೇವವ ಒಂದು ಮನೆಯವರಿಂದ ಸುಮಾರು 1360 ಮಂದಿಗೆ ಅನ್ಯಾಯ ಆಗುತ್ತಿದೆ. ರಸ್ತೆ ಅಗಲೀಕರಣ ಹಿನ್ನಲೆಯಲ್ಲಿ ಹಿಂದೆ ಇದೇ ಜಾಗದಲ್ಲಿ ಇದ್ದ ತಂಗುದಾಣವನ್ನು ತೆರವು ಮಾಡಲಾಗಿದೆ. ಇದೀಗ ಬಸ್ ತಂಗುದಾಣಕ್ಕಾಗಿ ಸರ್ವೆ ಕಾರ್ಯ ನಡೆದು ಕಾಮಗಾರಿ ಆರಂಭಗೊಂಡಿದೆ. ಇದೀಗ ಒಂದು ಮನೆಯವರಿಂದ ಸಮಸ್ಯೆ ಉಂಟಾಗಿದ್ದು, ಇಲ್ಲೇ ತಂಗುದಾಣ ಆಗಬೇಕೆಂದು ವಿದ್ಯಾರ್ಥಿಗಳೂ ಪ್ರತಿಭಟನೆ ನಡೆಸಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಈ ಕುರಿತು ಅಪರ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರಲ್ಲಿ ಮಾಹಿತಿ ಪಡೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್, ಈಗಾಗಲೇ ಗುರುತಿಸಿದ ಜಾಗದಲ್ಲೇ ಬಸ್ ತಂಗುದಾಣ ನಿರ್ಮಿಸಲಾಗುವುದು. ಇದಕ್ಕಾಗಿ ಪಿಆರ್‍ಎಲ್‍ಡಿಯಿಂದ ಹಣ ಕೂಡಾ ಮಂಜೂರಾಗಿದೆ ಎಂದು ತಿಳಿಸಿ ಅಹವಾಲುದಾರರನ್ನು ಸಮಾಧಾನ ಪಡಿಸಿದರು.
ಕಬಕ ಗ್ರಾಪಂ ವ್ಯಾಪ್ತಿಯ ಮುರ ಎಂಬಲ್ಲಿ ಸಾರ್ವಜನಿಕರ ವಿರೋಧದ ನಡುವೆ ಇತ್ತೀಚೆಗೆ ತೆರೆದುಕೊಂಡ ಬಾರ್ ನ್ನು ಅಲ್ಲಿಂದ ಸ್ಥಳಾಂತರಿಸಬೇಕು ಎಂದು ಸ್ಥಳಿಯವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿಗಳು ಈ ಕುರಿತು ಅಬಕಾರಿ ಇನ್‍ಸ್ಪೆಕ್ಟರ್ ಅವರನ್ನು ವಿಚಾರಿಸಿದಾಗ, ಪ್ರತಿಕ್ರಿಯೆ ನೀಡಿದ ಅಬಕಾರಿ ಇನ್‍ಸ್ಪೆಕ್ಟರ್, ಅಬಕಾರಿ ಇಲಾಖೆ ನಿಯಮದಂತೆ ಬಾರ್ ತೆರೆಯಲಾಗಿದೆ. ಈ ವಿಚಾರದಲ್ಲಿ ನಮ್ಮ ಇಲಾಖೆಯ ತಪ್ಪಿಸಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಬಕ ಗ್ರಾಪಂ ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ, ಗ್ರಾಪಂ ಗಮನಕ್ಕೆ ತಾರದೆ ಈ ಕಟ್ಟಡದಲ್ಲಿ ಬಾರ್ ತೆರೆಲಾಗಿದೆ ಎಂದಾದರೆ ಗ್ರಾಪಂ ಇದ್ದು ಏನು ಪ್ರಯೋಜನ, ಬಾರ್ ತೆರೆಯಲು ನಾವು ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿಸಿದರು. ಅಷ್ಟರಲ್ಲಿ ಅಹವಾಲುದಾರರು ನಮಗೆ ನ್ಯಾಯ ಬೇಕು ಎಂದು ಘೋಷಣೆಗಳನ್ನು ಕೂಗಿದಾಗ, ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಶೀಲಿಸುತ್ತೇವೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು ಅಕ್ರಮ-ಸಕ್ರಮ ನಮೂನೆ-57 ರಲ್ಲಿ ಕುಮ್ಕಿ ಜಮೀನು ಮಂಜೂರಾತಿಗೆ ಅವಕಾಶ ಕಲ್ಪಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಅಕ್ರಮ-ಸಕ್ರಮದಲ್ಲಿ ಅನುಮತಿ ನೀಡಬೇಕು ಅಥವಾ ನೇರವಾಗಿಯು ಕುಮ್ಕಿ ಹಕ್ಕು ನೀಡಬೇಕು ಎನ್ನುವ ಬಗ್ಗೆ ಕಂದಾಯ ಸಚಿವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಸರಕಾರ ಹತ್ತಾರು ಜನಪರ ಕಾರ್ಯಕ್ರಮ ನೀಡಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ನಿರ್ಮಾಣ, ಅಮೃತ ಗ್ರಾಮ, ಅಮೃತ ವಸತಿ ನೀಡಲಾಗಿದೆ. ಆದರ್ಶ ಗ್ರಾಮ ಪಂಚಾಯತ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸರಕಾರದ ಆಡಳಿತವು ಜನರ ಕುಂದು ಕೊರತೆ ಆಲಿಸಲು ಗ್ರಾಮಕ್ಕೆ ತೆರಳುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯಕ್ತ ಗಿರೀಶ್ ನಂದನ್, ತಹಶೀಲ್ದಾರ್ ನಿಸರ್ಗಪ್ರಿಯ, ಭೂಮಾಪನ ಇಲಾಖೆಯ ಉಪ ನಿರ್ದೇಶಕ ನಿರಂಜನ್, ಆಹಾರ ಇಲಾಖೆಯ ಅಧಿಕಾರಿ ಮಾಣಿಕ್ಯ, ಎಸಿಎಫ್ ಕಾರ್ಯಪ್ಪ, ಕೃಷಿ ಇಲಾಖೆಯ ಉಪ ನಿರ್ದೇಶಕ ಶಿವಶಂಕರ, ಜಂಟಿ ನಿರ್ದೇಶಕಿ ಸೀತಾ, ನಗರಸಭೆ ಪೌರಯುಕ್ತ ಮಧು ಎಸ್ ಮನೋಹರ್, ಕಬಕ ಗ್ರಾ.ಪಂ.ಉಪಾಧ್ಯಕ್ಷ ರುಕ್ಮಯ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಉಪತಹಸೀಲ್ದಾರ್ ಸುಲೋಚನಾ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್, ಗ್ರೇಡ್2 ತಹಸೀಲ್ದಾರ್ ದಯಾನಂದ ಕಾರ್ಯಕ್ರಮ ನಿರೂಪಿಸಿದರು. ರಸ್ತೆ, ವಸತಿ, ನಿವೇಶನ, ಮೆಸ್ಕಾಂ, ಕೆಎಸ್‍ಆರ್‍ಟಿಸಿ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿ ಒಟ್ಟು 60 ಅರ್ಜಿ ಸ್ವೀಕರಿಸಲಾಯಿತು.







