ಬ್ರಾಹ್ಮಣ್ಯ ಒಪ್ಪುವವರಿಂದ ಸಂವಿಧಾನ ಬದಲಾಯಿಸುವ ಪ್ರಯತ್ನ: ಪ್ರೊ.ಚಂದ್ರ ಪೂಜಾರಿ
ಮಾನವ ಬಂಧುತ್ವ ವೇದಿಕೆಯ ವತಿಯಿಂದ ವಿಚಾರ ಸಂಕಿರಣ

ಉಡುಪಿ, ಸೆ.18: ಬ್ರಾಹ್ಮಣ್ಯ ಎಂದಿಗೂ ಜಾತಿ, ಧರ್ಮ, ಲಿಂಗ ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಭಾತೃತ್ವ ವನ್ನು ಒಪ್ಪುವುದಿಲ್ಲ. ಹಾಗಾಗಿ ಬ್ರಾಹ್ಮಣ್ಯವನ್ನು ಒಪ್ಪುವವರಿಗೆ ಸಮಾನತೆ, ಸ್ವಾತಂತ್ವ್ಯ, ಭಾತೃತ್ವವನ್ನು ಮೂಲಭೂತ ಹಕ್ಕಿನ ರೂಪದಲ್ಲಿ ನೀಡಿರುವ ಸಂವಿಧಾನವನ್ನು ಒಪ್ಪಲು ಆಗುವುದಿಲ್ಲ. ಅದಕ್ಕಾಗಿ ಅವರು ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಎಂ.ಚಂದ್ರ ಪೂಜಾರಿ ಹೇಳಿದ್ದಾರೆ.
ಮಾನವ ಬಂಧುತ್ವ ವೇದಿಕೆ ಕರ್ನಾಟಕ ಉಡುಪಿ ಜಿಲ್ಲಾ ಸಂಚಾಲನ ಸಮಿತಿಯ ವತಿಯಿಂದ ರವಿವಾರ ಉಡುಪಿ ಕರಾವಳಿ ಬೈಪಾಸ್‌ನ ಹೊಟೇಲ್ ಮಣಿಪಾಲ ಇನ್ ಸಭಾಂಗಣದಲ್ಲಿ ಆಯೋಜಿಸಲಾದ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಅವರು ‘ಪ್ರಸಕ್ತ ಆರ್ಥಿಕ ಸ್ಥಿತಿ, ಭ್ರಮೆ ಮತ್ತು ವಾಸ್ತವ’ ಕುರಿತು ವಿಷಯ ಮಂಡಿಸಿದರು.
ಮೊಗಲರು, ಬ್ರಿಟೀಷರ ಆಳ್ವಿಕೆಯಿಂದ ಬ್ರಾಹ್ಮಣ್ಯಕ್ಕೆ ಯಾವುದೇ ತೊಂದರೆ ಆಗಿರಲಿಲ್ಲ. ಆದರೆ ಸಂವಿಧಾನ ಜಾರಿಗೆ ಬಂದ ನಂತರವೇ ಬ್ರಾಹ್ಮಣ್ಯಕ್ಕೆ ಸಾಕಷ್ಟು ತೊಂದರೆಗಳಾಗಿರುವುದು. ಈವರೆಗೆ ಬ್ರಾಹ್ಮಣ್ಯವನ್ನು ಪ್ರಶ್ನೆ ಮಾಡಿರುವುದು ನಮ್ಮ ಸಂವಿಧಾನ ಮಾತ್ರ. ಆದುದರಿಂದಲೇ ಇವರಿಗೆ ಸಂವಿಧಾನವನ್ನು ಒಪ್ಪಲು ಆಗುತ್ತಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ಬ್ರಾಹ್ಮಣರು ಬೇರೆ ಬ್ರಾಹ್ಮಣ್ಯ ಬೇರೆ. ಬ್ರಾಹ್ಮಣ್ಯ ಒಂದು ಸಿದ್ಧಾಂತ, ವೈಚಾರಿಕತೆ ಯಾದರೆ ಬ್ರಾಹ್ಮಣ ಒಂದು ಜಾತಿಯಾಗಿದೆ. ಬ್ರಾಹ್ಮಣ್ಯವು ಇವತ್ತು ನಮ್ಮ ದೇಶ ದಲ್ಲಿ ಜಾಗೃತವಾಗಲು ಬ್ರಾಹ್ಮಣೇತರರು ಕಾರಣವೇ ಹೊರತು ಬ್ರಾಹ್ಮಣರಲ್ಲ. ಬ್ರಾಹ್ಮಣೇತರಲ್ಲಿ ಬ್ರಾಹ್ಮಣ್ಯವನ್ನು ತುಂಬಿಸಿದ ಪರಿಣಾಮ ಇಂದು ಬ್ರಾಹ್ಮಣ್ಯ ಇಷ್ಟು ವೇಗದಲ್ಲಿ ಪ್ರತಿಯೊಬ್ಬರ ಮನಸ್ಸನ್ನು ಆಕ್ರಮಿಸಿಕೊಳ್ಳಲು ಸಾಧ್ಯವಾಗಿದೆ. ಹಾಗಾಗಿ ನಾವು ಉಪದೇಶ ಮಾಡಬೇಕಾಗಿರುವುದು ಬ್ರಾಹ್ಮಣ್ಯರಿಗೆ ಅಲ್ಲ ಬ್ರಾಹ್ಮಣೇತರಿಗೆ. ಈ ಬ್ರಾಹ್ಮಣ್ಯದಿಂದ ಹೊರ ಬರುವುದು ಬಹುದೊಡ್ಡ ಸವಾಲು ಆಗಿದೆ ಎಂದರು.
ಲೇಖಕ ಮತ್ತು ಸಾಂಸ್ಕೃತಿಕ ಚಿಂತಕ ಡಾ.ರಾಜಪ್ಪ ದಳವಾಯಿ ‘ಸಂವಿಧಾನ ಸಂರಕ್ಷಣೆ ಮತ್ತು ಸವಾಲುಗಳು’, ತರೀಕೆರೆ ಸರಕಾರಿ ಕಲಾ ಕಾಲೇಜಿನ ಪ್ರಾಂಶುಪಾಲೆ ಹಾಗೂ ಲೇಖಕಿ ಡಾ.ಸಬಿತಾ ಬನ್ನಾಡಿ ‘ಬಹುತ್ವ ಭಾರತ ನಿರ್ಮಾಣದಲ್ಲಿ ಮಹಿಳೆಯರು’ ಎಂಬ ವಿಷಯದ ಕುರಿತು ಮಾತನಾಡಿದರು. ನಿವೃತ್ತ ಉಪನ್ಯಾಸಕಿ ಹಾಗೂ ಲೇಖಕಿ ರೇಖಾ ಬನ್ನಾಡಿ, ದಲಿತ ಮುಖಂಡ ಜಯನ್ ಮಲ್ಪೆ, ಸಾಹಿತಿ ಬೆರ್ನಾಡ್ ಐ.ಡಿ.ಕೊಸ್ಟಾ, ರೆನಾಲ್ಡ್ ಮನೋಹರ್ ಕರ್ಕಡ ಉಪಸ್ಥಿತರಿದ್ದರು.
ವೇದಿಕೆಯ ಮಂಗಳೂರು ವಿಭಾಗದ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮುಹಮ್ಮದ್ ಶೀಷ್ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಮಂಜಿತ್ ನಾಗರಾಜ್ ವಂದಿಸಿದರು. ಸ್ಟೀವನ್ ಕೊಲಾಸೊ ಕಾರ್ಯಕ್ರಮ ನಿರೂಪಿಸಿದರು.
‘ಶೇ.70-80 ಮಂದಿಯ ದುಡಿಮೆ ಶ್ರಮ’
ನಮ್ಮ ಸಮಾಜ, ಸಂಸ್ಕೃತಿ, ಅರ್ಥವ್ಯವಸ್ಥೆ ಹಾಗೂ ರಾಜಕೀಯವು ಶೇ.೭೦-೮೦ ರಷ್ಟು ಮಂದಿಯ ದುಡಿಮೆಯ ಶ್ರಮದ ಮೇಲೆ ನಿಂತಿದೆ. ಆದರೆ ಮಾಧ್ಯಮ ಗಳು ರಾಜಕೀಯ ಪಕ್ಷ ಸೇರಿದಂತೆ ಇಡೀ ವ್ಯವಸ್ಥೆ ಬೇರೆಯೇ ಚಿತ್ರಣ ಕೊಡುತ್ತಿದೆ. ದುಡಿಯುವರನ್ನು ಪರಾವಲಂಬಿ ಎಂದು, ಪರಾವಲಂಬಿಗಳನ್ನು ದುಡಿಯುವ ವರು ಎಂಬುದಾಗಿ ಮಂಡಿಸುತ್ತಿದ್ದಾರೆ ಎಂದು ಎಂ.ಚಂದ್ರ ಪೂಜಾರಿ ತಿಳಿಸಿದರು.
ಉಚಿತ ಬಿಸಿಯೂಟ, ಹಾಲು, ಮೊಟ್ಟೆ, ವಿದ್ಯುತ್, ಅಕ್ಕಿ ಕೊಡುವುದರಿಂದ ಹಣಕಾಸಿಗೆ ಯಾವುದೇ ಸಮಸ್ಯೆ ಆಗಿಲ್ಲ. ಇದರಿಂದ ನಮ್ಮ ದೇಶದ ಬಹುದೊಡ್ಡ ಮಾನವ ಸಂಪನ್ಮೂಲ ವೃದ್ಧಿಯಾಗುತ್ತಿದೆ. ಆದರೆ ಉಚಿತ ಕೊಡುಗೆಗಳನ್ನು ನೀಡು ವುದರಿಂದಲೇ ನಮ್ಮ ಹಣಕಾಸು ಬಿಗಾಡಿಸುತ್ತಿದೆ ಎಂದು ಸುಳ್ಳು ಹೇಳಲಾಗುತ್ತಿದೆ. ರಾಜ್ಯಗಳ ಹಣಕಾಸು ವ್ಯವಸ್ಥೆ ಬಿಗಾಡಿಸಲು ನಿಜವಾದ ಕಾರಣ ಅತಿ ಹೆಚ್ಚು ಜವಾಬ್ದಾರಿ ಇರುವ ರಾಜ್ಯಗಳಿಗೆ ಕಡಿಮೆ ಸಂಪನ್ಮೂಲ ಸಂಗ್ರಹಿಸಲು ಮತ್ತು ಕಡಿಮೆ ಜವಾಬ್ದಾರಿ ಇರುವ ಕೇಂದ್ರ ಸರಕಾರಕ್ಕೆ ಹೆಚ್ಚು ಸಂಪನ್ಮೂಲ ಸಂಗ್ರಹಿಸಲು ಅವಕಾಶ ಇರುವುದು ಎಂದರು.







