ಓಣಂ ಎಲ್ಲ ಜಾತಿ, ಧರ್ಮ, ವರ್ಗದವರ ಹಬ್ಬ: ಉಡುಪಿ ಡಿಸಿ ಕೂರ್ಮಾರಾವ್

ಉಡುಪಿ : ಓಣಂ ಹಬ್ಬ ಸಾಕಷ್ಟು ವೈಶಿಷ್ಟತೆಯುನ್ನು ಹೊಂದಿದೆ. ಓಣಂ ಎಲ್ಲ ಜಾತಿ, ಧರ್ಮ, ವರ್ಗದವರ ಹಬ್ಬವಾಗಿದ್ದು, ಯಾವುದೇ ಬೇಧವಿಲ್ಲದೆ ಆಚರಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದ್ದಾರೆ.
ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ಉಡುಪಿ ವತಿಯಿಂದ ಬನ್ನಂಜೆ ಶ್ರೀನಾರಾಯಣಗುರು ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ 19ನೇ ವಾರ್ಷಿಕೋತ್ಸವ ಮತ್ತು ಓಣಂ ಹಬ್ಬದ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಕೇರಳ ಹಾಗೂ ಉಡುಪಿಯ ಸಂಸ್ಕೃತಿಗೂ ಸಾಮ್ಯತೆ ಇದೆ. ಕೇರಳ ಮತ್ತು ಉಡುಪಿಯವರು ಎಲ್ಲ ಕಡೆಗಳಲ್ಲೂ ಹರಡಿಕೊಂಡು ಆ ಪ್ರದೇಶದವರೊಂದಿಗೆ ಬೆರೆತು ಅವರ ಸಂಸ್ಕೃತಿಯನ್ನು ಪಾಲಿಸಿ ಬದುಕುತ್ತಿದ್ದಾರೆ. ಎಲ್ಲ ಜಾತಿ, ಮತ, ಪಂಥ, ಭಾಷೆಗಳನ್ನು ಪ್ರೀತಿಸುವುದು ನಮ್ಮ ಸಂಸ್ಕೃತಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ಅಧ್ಯಕ್ಷ ಸುಗುಣ ಕುಮಾರ್ ವಹಿಸಿದ್ದರು. ನಿಟ್ಟೆ ಕೆಎಸ್ ಹೆಗ್ಡೆ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ.ಶಂಕರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಪೂಕಳಂ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗ್ನಿನ್ನೆಸ್ ದಾಖಲೆಯ ಯೋಗ ಪಟು ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು.
ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಸ್ಯಾಮುವೆಲ್ ಕೆ.ಸ್ಯಾಮುವೆಲ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಕೆರಳ ಹಾಜಬ್ಬ, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಸೆಂಟರ್‌ನ ಕೋಶಾಧಿಕಾರಿ ರಾಜನ್ ಪಿಲಿಪ್ಸ್ ಉಪಸ್ಥಿತರಿದ್ದರು.
ಓಣಂ ಹಬ್ಬ ಆಚರಣೆ ಕಮಿಟಿಯ ಅಧ್ಯಕ್ಷ ಟಿ.ಎ.ರವಿರಾಜನ್ ಸ್ವಾಗತಿಸಿದರು. ಕಾರ್ಯದರ್ಶಿ ಬಿನೇಶ್ ವಿ.ಸಿ. ವಂದಿಸಿದರು. ರಜನಿ ಕಾರ್ಯಕ್ರಮ ನಿರೂಪಿಸಿ ದರು. ಸೆಂಟರ್ ಸದಸ್ಯರ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಗಳು ನಡೆದವು.







