ಡಿಎಆರ್ ಪೊಲೀಸರ 20 ವರ್ಷಗಳ ಸಾರ್ಥಕ ಸೇವೆಯ ಸಂಭ್ರಮ

ಉಡುಪಿ, ಸೆ.18: ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 2002ನೇ ಸಾಲಿನ ಸಿಬ್ಬಂದಿಗಳ 20 ವರ್ಷದ ಸಾರ್ಥಕ ಸೇವೆಯ ಸಂಭ್ರಮದ ಕಾರ್ಯ ಕ್ರಮವು ಸೆ.16ರಂದು ಉಡುಪಿ ಬಡಗುಬೆಟ್ಟು ಕೋಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಮಾತನಾಡಿ, 2002ನೇ ಸಾಲಿನ ಸಿಬ್ಬಂದಿ ಇದುವರೆಗೂ ಯಾವುದೇ ಕರ್ತವ್ಯ ಲೋಪವಿಲ್ಲದೆ ಕರ್ತವ್ಯ ನಿರ್ವಹಿಸಿದ್ದಾರೆ. ಪೋಲಿಸ್ ಸೇವೆಗೆ ಸೇರಿ 20 ವರ್ಷಗಳಾದ ಹಿನ್ನಲೆಯಲ್ಲಿ ಅವರು ಅನಾಥಲಯ ಹಾಗೂ ವಿಶೇಷ ಚೇತನ ಮಕ್ಕಳ ಶಾಲೆಗೆ ಧನ ಸಹಾಯ ಮಾಡಿರುವುದು ಶ್ಲಾಘನೀಯ. 20 ವರ್ಷ ಸೇವೆ ಸಲ್ಲಿಸಿದ ಈ ಸಿಬ್ಬಂದಿಗಳು ಪೋಲಿಸ್ ಇಲಾಖೆಯ ಬೆನ್ನೆಲುಬು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ, ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.
2008ರಲ್ಲಿ ಮುಖ್ಯಮಂತ್ರಿ ಪದಕ ವಿಜೇತ 2002ನೇ ಸಾಲಿನ ಸಿಬ್ಬಂದಿ ಸುರೇಂದ್ರ ಬೋವಿ ಹಾಗೂ 2002ನೇ ಸಾಲಿನ ಸಿಬ್ಬಂದಿಗೆ ಉಡುಪಿಯಲ್ಲಿ ಮೂಲ ತರಬೇತಿ ನೀಡಿದ ಸಂತೋಷ್ ನಾಯ್ಕ್, ನಾಗರಾಜ ಪ್ರಭು ಹಾಗೂ ಶಶಿಧರ ನಾಯ್ಕರನ್ನು ಸನ್ಮಾನಿಸಲಾಯಿತು.
2002ನೇ ಸಾಲಿನ ಡಿ.ಎ.ಆರ್ ಸಿಬ್ಬಂದಿ ಸಂಗ್ರಹಿಸಿದ ತಮ್ಮ ಹಣವನ್ನು ಅಪ್ಪ ಅನಾಥಾಲಯ ಕೂರಾಡಿ ಹಾಗೂ ವಿಶೇಷ ಚೇತನ ಮಕ್ಕಳ ಶಾಲೆ ಶಾಂತಿ ನಿಕೇತನಕ್ಕೆ ಹಸ್ತಾಂತರಿಸಿದರು. ಎಸ್‌ಪಿ ಕಚೇರಿಯ ಉದಯ ಕುಮಾರ್ ಪ್ರಾರ್ಥಿಸಿ, ಸತೀಶ್ ನಾಯ್ಕ ಸ್ವಾಗತಿಸಿದರು. ಸುನೀಲ್ ಪೂಜಾರಿ ವಂದಿಸಿದರು. ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.







